ಬಿಕ್ಕಟ್ಟು ನಿವಾರಣೆ ಮಾತುಕತೆಗೆ ಮ್ಯಾಡ್ರಿಡ್ ಮುಂದು

Update: 2017-10-11 16:20 GMT

ಬಾರ್ಸಿಲೋನ (ಸ್ಪೇನ್), ಅ. 11: ಸ್ಪೇನ್‌ನಿಂದ ಕ್ಯಾಟಲನ್ ರಾಜ್ಯವನ್ನು ಸ್ವತಂತ್ರಗೊಳಿಸುವ ಘೋಷಣೆಯನ್ನು ಆ ರಾಜ್ಯದ ನಾಯಕರು ಅಮಾನತಿನಲ್ಲಿರಿಸಿ ಸ್ಪೇನ್ ಸರಕಾರದ ಜೊತೆ ಸಂಧಾನಕ್ಕೆ ಮುಂದಾದ ಹಿನ್ನೆಲೆಯಲ್ಲಿ, ಸರಕಾರವು ಬುಧವಾರ ಬಿಕ್ಕಟ್ಟು ನಿವಾರಣೆ ಮಾತುಕತೆಗಳಿಗೆ ಸಿದ್ಧತೆಗಳನ್ನು ಮಾಡಿದೆ.

ಸ್ಪೇನ್‌ನಿಂದ ಕ್ಯಾಟಲೋನಿಯ ಪ್ರತ್ಯೇಕಗೊಳ್ಳಬೇಕೇ ಎಂಬ ಬಗ್ಗೆ ಈ ತಿಂಗಳ ಆರಂಭದಲ್ಲಿ ಜನಮತಗಣನೆ ನಡೆದಿತ್ತು.

 ಕ್ಯಾಟಲೋನಿಯ ಸ್ವತಂತ್ರ ದೇಶವಾಗಬೇಕೆಂಬ ಜನಾದೇಶವನ್ನು ತಾನು ಒಪ್ಪಿಕೊಂಡಿರುವುದಾಗಿ ಕ್ಯಾಟಲನ್ ನಾಯಕ ಕಾರ್ಲ್ಸ್ ಪುಯಿಜ್‌ಮೋಂಟ್ ಮಂಗಳವಾರ ಘೋಷಿಸಿದ ಬಳಿಕ, ಸ್ಪೇನ್ ಪ್ರಧಾನಿ ಮರಿಯಾನೊ ರಜೊಯ್ ತುರ್ತು ಸಚಿವ ಸಂಪುಟ ಸಭೆ ಏರ್ಪಡಿಸಿದ್ದಾರೆ.

ಕ್ಯಾಟಲೋನಿಯದ ಸ್ವಾತಂತ್ರ್ಯವನ್ನು ತಡೆಯಲು ತನ್ನ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಕಾರ್ಯಗಳನ್ನು ಮಾಡುವುದಾಗಿ ರಜೊಯ್ ಘೋಷಿಸಿದ್ದಾರೆ ಹಾಗೂ ಅರೆ ಸ್ವಾಯತ್ತ ಪ್ರದೇಶದ ಮೇಲೆ ನೇರ ಆಳ್ವಿಕೆಯನ್ನು ವಿಧಿಸುವ ಸಾಧ್ಯತೆಯನ್ನೂ ಅವರು ತಳ್ಳಿಹಾಕಿಲ್ಲ.

ಕ್ಯಾಟಲೋನಿಯದ ಮೇಲೆ ನೇರ ಆಳ್ವಿಕೆಯನ್ನು ಸ್ಪೇನ್ ಹೇರಿದರೆ ಅದು ಅಭೂತಪೂರ್ವ ಕ್ರಮವಾಗುತ್ತದೆ ಹಾಗೂ ಅದು ಅಶಾಂತಿಗೆ ಕಾರಣವಾಗಬಹುದು ಎಂಬ ಭೀತಿಯನ್ನು ಜನರು ಹೊಂದಿದ್ದಾರೆ.

ಸ್ಪೇನ್‌ನ ಆರ್ಥಿಕ ಚೈತನ್ಯ ಕೇಂದ್ರವಾಗಿರುವ ಕ್ಯಾಟಲನ್ ವಲಯದಲ್ಲಿ ವಾಸಿಸುತ್ತಿರುವ ಸುಮಾರು 75 ಲಕ್ಷ ಜನರ ಭವಿಷ್ಯ ಸದ್ಯಕ್ಕೆ ಅತಂತ್ರವಾಗಿದೆ. ಕ್ಯಾಟಲೋನಿಯವು ಸ್ಪೇನ್‌ನಿಂದ ಬೇರ್ಪಟ್ಟರೆ ಐರೋಪ್ಯ ಒಕ್ಕೂಟದ ಸ್ಥಿರತೆಯ ಮೇಲೆ ಅದು ಪರಿಣಾಮ ಬೀರುತ್ತದೆ ಎಂಬ ಆತಂಕವೂ ಐರೋಪ್ಯ ವಲಯದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News