ಗುಜರಾತ್‌ನಲ್ಲಿ 30 ಲಕ್ಷ ಯುವಜನರು ನಿರುದ್ಯೋಗಿಗಳು: ರಾಹುಲ್ ಗಾಂಧಿ
ಅಹ್ಮದಾಬಾದ್, ಅ.11: ಗುಜರಾತ್ ಸರಕಾರ ಯುವಜನತೆಗೆ ಉದ್ಯೋಗ ದೊರಕಿಸಿಕೊಡಲು ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದಲ್ಲಿ 30 ಲಕ್ಷ ಯುವಜನತೆ ನಿರುದ್ಯೋಗಿಗಳು ಎಂದು ಹೇಳಿದ್ದಾರೆ.
ಶಿಕ್ಷಣದ ಉದ್ದೇಶ ಉದ್ಯೋಗ ಪಡೆಯುವುದು. ಗುಜರಾತ್ ಸರಕಾರ ಶಿಕ್ಷಣಕ್ಕೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೆ ಉದ್ಯೋಗ ನೀಡುತ್ತಿಲ್ಲ ಎಂದು ಇಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್ ಹೇಳಿದರು.
ರಾಜ್ಯ ಸರಕಾರ ನಿಮ್ಮ ಜಮೀನನ್ನು ಕಿತ್ತುಕೊಂಡಿದೆ, ನಿಮಗೆ ಪರಿಹಾರವನ್ನೂ ನೀಡಿಲ್ಲ. ನಿಮ್ಮ ಮೇಲೆ ಲಾಠಿಚಾರ್ಜ್ ನಡೆಸುವ ರಾಜ್ಯಸರಕಾರ ನರ್ಮದಾ ನದಿ ನೀರನ್ನು ಹತ್ತು ಉದ್ಯಮಿಗಳಿಗೆ ಹಂಚಿದೆ. ಇದು ಗುಜರಾತ್ ಮಾದರಿ ಎಂದು ರಾಹುಲ್ ವ್ಯಂಗ್ಯವಾಡಿದರು.
ನೋಟು ರದ್ದತಿಯ ಕ್ರಮವನ್ನು ಟೀಕಿಸಿದ ರಾಹುಲ್, ಪ್ರಧಾನಿ ಮೋದಿ ರೈತರು, ಕಾರ್ಮಿಕರು ಅಥವಾ ಸಣ್ಣ ಅಂಗಡಿಯವರಲ್ಲಿ ಅಭಿಪ್ರಾಯ ಕೇಳಬೇಕಿತ್ತು. ಯಾಕೆಂದರೆ ಇವರೆಲ್ಲಾ ಚೆಕ್‌ಪುಸ್ತಕ ಬಳಸುವುದಿಲ್ಲ, ಏನಿದ್ದರೂ ನಗದು ವ್ಯವಹಾರ ಎಂದು ನುಡಿದರು. ನೋಟು ರದ್ದತಿಯ ಮೂಲಕ ‘ನಿಜವಾದ ಕಳ್ಳ’ರಿಗೆ ಕಪ್ಪುಹಣ ಬಿಳುಪಾಗಿಸಲು ಅವಕಾಶ ನೀಡಲಾಗಿದೆ ಎಂದ ರಾಹುಲ್, ಸಣ್ಣ ವ್ಯಾಪಾರಿಗಳನ್ನು ನಿರ್ನಾಮಗೊಳಿಸುವ ಏಕೈಕ ಉದ್ದೇಶದಿಂದ ಜಿಎಸ್‌ಟಿ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ಛೋಟಾ ಉದಯ್‌ಪುರ ಎಂಬಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ರಾಹುಲ್, ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಖಾಸಗಿ ನಿಯಂತ್ರಣಕ್ಕೆ ವಹಿಸುವ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿಯವರ ನಿರ್ಧಾರವನ್ನು ಟೀಕಿಸಿದರು.