×
Ad

ಇಂಗ್ಲೆಂಡ್, ಫ್ರಾನ್ಸ್ ಪ್ರಿ-ಕ್ವಾರ್ಟರ್ ಫೈನಲ್ ಗೆ ತೇರ್ಗಡೆ

Update: 2017-10-11 23:56 IST

ಕೋಲ್ಕತಾ, ಅ.11: ಇಂಗ್ಲೆಂಡ್ ಹಾಗೂ ಫ್ರಾನ್ಸ್ ತಂಡಗಳು ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿವೆ.

ಬುಧವಾರ ನಡೆದ ‘ಎಫ್’ ಗುಂಪಿನ ಪಂದ್ಯದಲ್ಲಿ ಮತ್ತೊಮ್ಮೆ ಶ್ರೇಷ್ಠ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡ ಮೆಕ್ಸಿಕೊವನ್ನು 3-2 ಗೋಲುಗಳಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಯಿತು.

ತನ್ನ ಮೊದಲ ಪಂದ್ಯದಲ್ಲಿ ಚಿಲಿ ತಂಡವನ್ನು 4-0 ಅಂತರದಿಂದ ಮಣಿಸಿದ್ದ ಇಂಗ್ಲೆಂಡ್ ತಂಡ ‘ಎಫ್’ ಗುಂಪಿನಲ್ಲಿ 6 ಅಂಕದೊಂದಿಗೆ ಅಗ್ರ ಸ್ಥಾನದಲ್ಲಿದೆ.

ಇಂಗ್ಲೆಂಡ್‌ನ ಪರ ರ್ಹಿಯಾನ್ ಬ್ರೆವ್‌ಸ್ಟರ್(39ನೆ ನಿಮಿಷ), ಫಿಲಿಪ್ ಫೋಡೆನ್(48ನೆ ನಿಮಿಷ)ಹಾಗೂ ಜಾಡನ್ ಸ್ಯಾಂಕೊ(55ನೆ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಮೆಕ್ಸಿಕೊ ತಂಡದ ಪರ ಡಿಯಾಗೊ ಲೈನೆಝ್ 65ನೆ ಹಾಗೂ 72ನೆ ನಿಮಿಷದಲ್ಲಿ ಅವಳಿ ಗೋಲು ಬಾರಿಸಿದರು. ತನ್ನ ಕೊನೆಯ ಲೀಗ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಇರಾಕ್ ತಂಡವನ್ನು ಹಾಗೂ ಮೆಕ್ಸಿಕೊ ತಂಡ ಚಿಲಿ ತಂಡವನ್ನು ಎದುರಿಸಲಿದೆ.

ಅಮಿನೆ ಗೌರಿ ಅವಳಿ ಗೋಲು: ಫ್ರಾನ್ಸ್‌ಗೆ ಜಯ

ಫಿಫಾ ಅಂಡರ್-17 ವಿಶ್ವಕಪ್‌ನ ‘ಇ’ ಗುಂಪಿನ ಪಂದ್ಯದಲ್ಲಿ ಅಮಿನೆ ಗೌರಿ ಬಾರಿಸಿದ ಅವಳಿ ಗೋಲುಗಳ(13ನೆ, 71ನೆ ನಿಮಿಷ) ನೆರವಿನಿಂದ ಫ್ರಾನ್ಸ್ ತಂಡ ಜಪಾನ್ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿದೆ.

ಗುವಾಹಟಿಯ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ 13ನೆ ನಿಮಿಷದಲ್ಲಿ ಗೋಲು ಖಾತೆ ತೆರೆದ ಅಮಿನೆ ಗೌರಿ ಜಪಾನ್‌ಗೆ ಆರಂಭದಲ್ಲೇ ಒತ್ತಡ ಹೇರಿದರು.

ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಜಪಾನ್ ತಂಡ ಹೋರಾಟವನ್ನು ಮುಂದುವರಿಸಿತು. ಕೆಟೊ ನಕಾಮುರಾ ಫ್ರಿ-ಕಿಕ್‌ನಲ್ಲಿ ಬಾರಿಸಿದ ಚೆಂಡು ವೈಡ್ ಆದ ಕಾರಣ ಜಪಾನ್ ಸಮಬಲ ಸಾಧಿಸುವ ಅವಕಾಶ ಕಳೆದುಕೊಂಡಿತು.

ದ್ವಿತೀಯಾರ್ಧದ 71ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಗೌರಿ ಫ್ರಾನ್ಸ್ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. 73ನೆ ನಿಮಿಷದಲ್ಲಿ ಟೈಸಿ ಮಿಯಾಶಿರೊ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿ ಜಪಾನ್ ಪರ ಸಮಾಧಾನಕರ ಗೋಲು ಬಾರಿಸಿದರು. ಟೂರ್ನಿಯಲ್ಲಿ ಸತತ ಎರಡನೆ ಜಯ ದಾಖಲಿಸಿ ಆರು ಅಂಕ ಗಳಿಸಿದ ಫ್ರಾನ್ಸ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗುವಾಹಟಿಯಲ್ಲಿ ನಡೆಯಲಿರುವ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಹೊಂಡುರಾಸ್‌ನ್ನು ಹಾಗೂ ಕೋಲ್ಕತಾದಲ್ಲಿ ಜಪಾನ್ ತಂಡ ನ್ಯೂ ಕ್ಯಾಲೆಡೋನಿಯವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News