ಅಪಹೃತ ಸಫ್ವಾನ್ ತಕ್ಷಣ ಪತ್ತೆಹಚ್ಚಲು ಡಿವೈಎಫ್ಐ ಆಗ್ರಹ

Update: 2017-10-12 12:17 GMT

ಮಂಗಳೂರು, ಅ. 12: ಸುರತ್ಕಲ್ ಠಾಣಾ ವ್ಯಾಪ್ತಿಯ ಕೃಷ್ಣಾಪುರದಲ್ಲಿ ಸ್ಥಳೀಯ ಯುವಕ ಸಫ್ವಾನ್ ಎಂಬಾತನನ್ನು ರೌಡಿ ತಂಡವೊಂದು ಅಪಹರಿಸಿ ಒಂದು ವಾರ ಕಳೆದಿದ್ದು, ಹಾಡುಹಗಲೇ ನಡುಬೀದಿಯಲ್ಲಿ ನಡೆದಿರುವ ಅಪಹರಣ ಪ್ರಕರಣವನ್ನು ಈವರಗೆ ಭೇದಿಸಲು ಪೊಲೀಸರಿಗೆ ಸಾಧ್ಯವಾಗದಿರುವುದು ಆತಂಕಕಾರಿ. ತಕ್ಷಣ ಪೊಲೀಸರು ಅಪಹರಣಕ್ಕೊಳಗಾದ ಸಫ್ವಾನ್ ರನ್ನು ಪತ್ತೆಹಚ್ಚಲು ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ ಸುರತ್ಕಲ್ ಘಟಕ ಒತ್ತಾಯಿಸಿದೆ.

ಸುರತ್ಕಲ್, ಕೃಷ್ಣಾಪುರ ಪ್ರದೇಶದಲ್ಲಿ ಗಾಂಜಾ ದಂಧೆ, ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಬೇಕು ಎಂದೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಸುರತ್ಕಲ್, ಕೃಷ್ಣಾಪುರ ಸೇರಿದಂತೆ  ಆಸುಪಾಸಿನಲ್ಲಿ ರೌಡಿ ತಂಡಗಳ ಚಟುವಟಿಕೆ ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಗಾಂಜಾ ಸಹಿತ ಮಾದಕ ಪದಾರ್ಥಗಳ ಮಾರಾಟ ಜಾಲ ಯುವಜನತೆಯನ್ನು ದಾರಿತಪ್ಪಿಸುತ್ತಿದೆ. ಸುಲಿಗೆ, ಬೆದರಿಸಿ ಹಣ ವಸೂಲಿ ದಂಧೆಗಳು ನಡೆಯುತ್ತಿವೆ. ಈ ಹಿಂದೆ ಹಲವು ಅಪಹರಣ, ಅತ್ಯಾಚಾರ, ಹಫ್ತಾ ವಸೂಲಿ, ದರೋಡೆ ಮುಂತಾದ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡ ಕುಖ್ಯಾತ ಕ್ರಿಮಿನಲ್ ಗಳು ಈ ಭಾಗದಲ್ಲಿ ಬೀಡು ಬಿಟ್ಟಿರುವುದು ಜನಸಾಮಾನ್ಯರ ನೆಮ್ಮದಿ ಕೆಡಿಸಿದೆ.  ಇಂತಹ ಕುಖ್ಯಾತ ತಂಡವೊಂದು ಸಫ್ವಾನ್ ರನ್ನು ಬೆನ್ನಟ್ಟಿ ಸಾರ್ವಜನಿಕರ ಮುಂದೆಯೇ ಹಲ್ಲೆಗೈದು ಅಪಹರಿಸಿದೆ. ಅಪಹರಣ ನಡೆದು ವಾರ ಕಳೆದರೂ ಸಫ್ವಾನ್ ರನ್ನು ಪತ್ತೆಹಚ್ಚಲು, ಅಪಹರಿಸಿದ ರೌಡಿ ತಂಡವನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇದು ಸ್ಥಳೀಯ ನಾಗರಿಕರಲ್ಲಿ ಭೀತಿಯನ್ನುಂಟು ಮಾಡಿದೆ. ಅಪಹರಣಗೊಂಡ ಸಫ್ವಾನ್ ಇರುವಿಕೆಯ ಬಗ್ಗೆ ಮಾಹಿತಿ ಇಲ್ಲದೆ ಆತನ ಬಡ ಕುಟುಂಬ ಕಂಗಾಲಾಗಿದೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.  ಸ್ಥಳೀಯವಾಗಿ ಭೀತಿಯುಂಟು ಮಾಡುತ್ತಿರುವ ರೌಡಿ ಚಟುವಟಿಕೆ, ಗಾಂಜಾ ಮಾರಾಟ ಜಾಲವನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಸುರತ್ಕಲ್ ಘಟಕ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News