ಸರಣಿ ಗೆಲುವಿನತ್ತ ವಿರಾಟ್ ಕೊಹ್ಲಿ ಬಳಗ ಚಿತ್ತ

Update: 2017-10-12 18:16 GMT

ಹೈದರಾಬಾದ್, ಅ.12: ಗುವಾಹತಿಯಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಸೋತಿರುವ ಭಾರತ ಕ್ರಿಕೆಟ್ ತಂಡ ಶುಕ್ರವಾರ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಸರಣಿ ನಿರ್ಣಾಯಕ ಮೂರನೆ ಹಾಗೂ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಆಸ್ಟ್ರೇಲಿಯ ತಂಡ ಸರಣಿ ಗೆಲುವಿನೊಂದಿಗೆ ಭಾರತ ಪ್ರವಾಸ ಅಂತ್ಯಗೊಳಿಸುವ ಯೋಜನೆಯಲ್ಲಿದೆ.

ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಾಬಲ್ಯ ಮೆರೆದಿದ್ದ ಕೊಹ್ಲಿ ಪಡೆ ಮೊದಲ ಟ್ವೆಂಟಿ-20 ಪಂದ್ಯವನ್ನು ಜಯಿಸಿ 1-0 ಮುನ್ನಡೆ ಸಾಧಿಸಿತ್ತು. ಆದರೆ, 2ನೆ ಪಂದ್ಯದಲ್ಲಿ ತಿರುಗಿಬಿದ್ದ ಕಾಂಗರೂ ಪಡೆ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

 ಗುವಾಹತಿಯಲ್ಲಿ ಮಂಗಳವಾರ ನಡೆದಿದ್ದ 2ನೆ ಪಂದ್ಯದಲ್ಲಿ ಭಾರತ ಎಲ್ಲ ವಿಭಾಗದಲ್ಲೂ ವಿಫಲವಾಗಿತ್ತು. ಆಸ್ಟ್ರೇಲಿಯದ ವೇಗದ ಬೌಲರ್ ಜೇಸನ್ ಬೆಹ್ರೆನ್‌ಡೊರ್ಫ್ ಸ್ವಿಂಗ್ ಬೌಲಿಂಗ್‌ನಿಂದ ಭಾರತದ ದಾಂಡಿಗರನ್ನು ಕಾಡಿದ್ದರು. ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮ, ಶಿಖರ್ ಧವನ್ ಹಾಗೂ ಮನೀಶ್ ಪಾಂಡೆ ವಿಫಲರಾಗಿದ್ದರು. ನಾಯಕ ಕೊಹ್ಲಿ ಖಾತೆ ತೆರೆಯಲು ವಿಫಲರಾಗಿದ್ದರು. ಕೊಹ್ಲಿ ಟ್ವೆಂಟಿ-20ಯಲ್ಲಿ ಮೊದಲ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಎರಡನೆ ಪಂದ್ಯದಲ್ಲಿ ಸ್ಪಿನ್ ಬೌಲರ್‌ಗಳು ದಂಡಿಸಲ್ಪಟ್ಟ ಹೊರತಾಗಿಯೂ ಕೊಹ್ಲಿ 3ನೆ ಪಂದ್ಯದಲ್ಲಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ನ್ಯೂಝಿಲೆಂಡ್ ವಿರುದ್ಧ ಮುಂಬರುವ ಸರಣಿಯಲ್ಲಿ ನಿವೃತ್ತಿಯಾಗಲು ಸಜ್ಜಾ ಗಿರುವ ಆಶೀಷ್ ನೆಹ್ರಾ 3ನೆ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ.

ಎರಡನೆ ಪಂದ್ಯದಲ್ಲಿ ಖಾಯಂ ನಾಯಕ ಸ್ಟೀವನ್ ಸ್ಮಿತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಬೆಹ್ರೆನ್‌ಡೊರ್ಫ್ ಆಕರ್ಷಕ ಸ್ಪೆಲ್ ಮೂಲಕ ಭಾರತಕ್ಕೆ ದುಃಸ್ವಪ್ನವಾಗಿ ಕಾಡಿದರೆ, 3ನೆ ಕ್ರಮಾಂಕದಲ್ಲಿ ಆಡಿದ್ದ ಆಲ್‌ರೌಂಡರ್ ಹೆನ್ರಿಕ್ಸ್ ತಂಡದ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿದ್ದರು.

ಹೈದರಾಬಾದ್‌ನ ರಾಜೀವ್‌ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದೆ. ಹೈದರಾಬಾದ್ ಪಿಚ್‌ನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ. ಗುವಾಹತಿಯ ಅಂಗಣ ಒದ್ದೆ ಯಾಗಿದ್ದ ಕಾರಣ ಕನಿಷ್ಠ ಸ್ಕೋರ್ ದಾಖಲಾಗಿತ್ತು.

 ಹೈದರಾಬಾದ್ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ಸಾಕಷ್ಟು ನಡೆದಿವೆ. ಆದರೆ, ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯ ಇದೇ ಮೊದಲ ಬಾರಿ ನಡೆಯುತ್ತಿದೆ. ಡೇವಿಡ್ ವಾರ್ನರ್‌ಗೆ ಹೈದರಾಬಾದ್ ಪಿಚ್‌ನಲ್ಲಿ ಹಲವಾರು ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವವಿದೆ.

ಕೊನೆಯ ಟ್ವೆಂಟಿ-20ಗೆ ಮಳೆ ಭೀತಿ

ಭಾರತ-ಆಸ್ಟ್ರೇಲಿಯದ ನಡುವೆ ಶುಕ್ರವಾರ ನಡೆಯಲಿರುವ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಇಂದು(ಗುರುವಾರ) ಮತ್ತು ನಾಳೆ(ಶುಕ್ರವಾರ)ನಗರದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ನಗರದಲ್ಲಿ ಪ್ರತಿನಿತ್ಯ ಉತ್ತಮ ಮಳೆ ಸುರಿಯುತ್ತಿದ್ದು ಸಾಮಾನ್ಯ ಜನಜೀವನಕ್ಕೆ ಧಕ್ಕೆಯಾಗಿದೆ.

ಪಂದ್ಯಕ್ಕೆ ಯಾವುದೇ ಸಮಸ್ಯೆಯಾಗದಂತೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ‘‘ಈಗ ಸುರಿಯುತ್ತಿರುವ ಮಳೆಯಿಂದಾಗಿ ಪಿಚ್ ಮೇಲೆ ಯಾವುದೇ ಪರಿಣಾಮಬೀರುವುದಿಲ್ಲ’’ ಎಂದು ಕ್ಯುರೇಟರ್ ವೈಎಲ್ ಚಂದ್ರಶೇಖರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News