ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗೆ ವಿಫಲ: 4548 ವೈದ್ಯರ ನೋಂದಣಿ ರದ್ದು
ಮುಂಬೈ, ಅ.13: ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 1 ವರ್ಷದ ಕಡ್ಡಾಯ ಸೇವೆಯನ್ನು ಸಲ್ಲಿಸದ 4548 ವೈದ್ಯರ ನೋಂದಣಿಯನ್ನು ಮಹಾರಾಷ್ಟ್ರ ಸರಕಾರ ರದ್ದುಪಡಿಸಿರುವುದಾಗಿ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನೆ (ಡಿಎಂಇಆರ್)ನ ನಿರ್ದೇಶನಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ವೈದ್ಯರುಗಳು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಒಂದು ವರ್ಷದವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಎಂಬಿಬಿಎಸ್ ಪದವೀಧರ ವೈದ್ಯರು 10 ಲಕ್ಷ ರೂ. ದಂಡ,ಸ್ನಾತಕೋತ್ತರ ಪದವಿಧರ ವೈದ್ಯರು 50 ಲಕ್ಷ ರೂ. ಹಾಗೂ ಸೂಪರ್‌ಸ್ಪೆಶಾಲಿಟಿ ವೈದ್ಯರು 2 ಕೋಟಿ ರೂ. ದಂಡ ಪಾವತಿಸಬೇಕಾಗುತ್ತದೆ.
ಆದರೆ ನೋಂದಣಿ ರದ್ದುಗೊಂಡ 4548 ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದೆ ಇದ್ದುದಕ್ಕಾಗಿ ತೆರಬೇಕಾದ ದಂಡವನ್ನು ಪಾವತಿಸಲು ವಿಫಲರಾಗಿದ್ದಾರೆಂದು ಡಿಎಂಇಆರ್ ಹೇಳಿಕೆಯಲ್ಲಿ ತಿಳಿಸಿದೆ.
ಈ ವೈದ್ಯರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಬೇಕಾದ ಬದ್ಧತೆಯನ್ನು ಈಡೇರಿಸಲು ಅಥವಾ ದಂಡವನ್ನು ಪಾವತಿಸಲು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿತ್ತೆಂದು ಡಿಎಂಇಆರ್‌ನ ವರಿಷ್ಠ ಡಾ.ಯ ಪ್ರವೀಣ್ ಶಿಂಗಾರೆ ತಿಳಿಸಿದ್ದಾರೆ.