ಅಗ್ರ ಸ್ಥಾನಕ್ಕಾಗಿ ಇಂಗ್ಲೆಂಡ್-ಇರಾಕ್ ಹಣಾಹಣಿ

Update: 2017-10-13 18:23 GMT

ಕೋಲ್ಕತಾ, ಅ.13: ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಶನಿವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಇರಾಕ್ ತಂಡಗಳು ‘ಎಫ್’ ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಹಣಾಹಣಿ ನಡೆಸಲಿವೆ.

ಸ್ಟೀವ್ ಕೂಪರ್ ನೇತೃತ್ವದ ಇಂಗ್ಲೆಂಡ್ ತಂಡ ತಾನಾಡಿರುವ ಎರಡೂ ಲೀಗ್ ಪಂದ್ಯಗಳನ್ನು ಜಯಿಸಿ 6 ಅಂಕ ಗಳಿಸಿದೆ. ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಗಿದೆ. ಮತ್ತೊಂದೆಡೆ, ಅಂಡರ್-16 ಏಷ್ಯನ್ ಚಾಂಪಿಯನ್ ಇರಾಕ್ ತನ್ನ ಮೊದಲ ಪಂದ್ಯದಲ್ಲಿ ಚಿಲಿಯನ್ನು 3-0 ಅಂತರದಿಂದ ಮಣಿಸಿದರೆ, ಮೆಕ್ಸಿಕೊ ವಿರುದ್ಧದ ಎರಡನೆ ಪಂದ್ಯದಲ್ಲಿ 1-1 ರಿಂದ ಡ್ರಾ ಸಾಧಿಸಿತು. ನಾಕೌಟ್ ಹಂತಕ್ಕೇರಲು ಇಂಗ್ಲೆಂಡ್ ವಿರುದ್ಧ ಕನಿಷ್ಠ ಡ್ರಾ ಸಾಧಿಸುವ ಅಗತ್ಯವಿದೆ. ಒಂದು ವೇಳೆ ಇರಾಕ್ ಸೋಲನುಭವಿಸಿದರೆ ಮೆಕ್ಸಿಕೊ ತಂಡ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆಯಬಹುದು. ಆದರೆ, 2ನೆ ಸ್ಥಾನ ಪಡೆಯಲು ಮೆಕ್ಸಿಕೊ ತಂಡ ಚಿಲಿ ವಿರುದ್ಧ ದೊಡ್ಡ ಅಂತರದಿಂದ ಜಯ ಸಾಧಿಸಬೇಕಾಗಿದೆ. ಟೂರ್ನಿಯ ನಿಯಮದ ಪ್ರಕಾರ ಒಂದು ವೇಳೆ ಎರಡೂ ತಂಡಗಳು ಅಂಕದಲ್ಲಿ ಸಮಬಲ ಸಾಧಿಸಿದರೆ, ಗೋಲು ವ್ಯತ್ಯಾಸ ಪರಿಗಣನೆಗೆ ಬರುತ್ತದೆ. ಗೋಲು ವ್ಯತ್ಯಾಸದಲ್ಲಿ ಇರಾಕ್(+3) ಮೆಕ್ಸಿಕೊ(-1) ವಿರುದ್ಧ ಮೇಲುಗೈ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News