ಏಷ್ಯಾಕಪ್ ಹಾಕಿ ಟೂರ್ನಿ: ಭಾರತಕ್ಕೆ ಪಾಕ್ ಎದುರಾಳಿ

Update: 2017-10-14 18:26 GMT

ಢಾಕಾ, ಅ.14: ಏಷ್ಯಾಕಪ್‌ನಲ್ಲಿ ಸತತ ಎರಡು ಗೆಲುವು ದಾಖಲಿಸಿದ್ದ ಭಾರತ ರವಿವಾರ ಇಲ್ಲಿ ನಡೆಯಲಿರುವ ಗ್ರೂಪ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿರುವ ಭಾರತ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1 ಮತ್ತು ಬಾಂಗ್ಲಾದೇಶ ತಂಡದ ವಿರುದ್ಧ 7-0 ಅಂತರದಲ್ಲಿ ಗೆಲುವು ದಾಖಲಿಸಿತ್ತು.

ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 7-0 ಅಂತರದಲ್ಲಿ ಜಯ ಗಳಿಸಿತ್ತು. ಜಪಾನ್ ವಿರುದ್ಧ 2-2  ್ರಾನಲ್ಲಿ ಕೊನೆಗೊಳಿಸಿತ್ತು.

ಭಾರತ ಪ್ರಸ್ತುತ 6 ಅಂಕ ಗಳಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ 4 ಅಂಕಗಳೊಂದಿಗೆ ಎರಡನೆ ಸ್ಥಾನ ಗಳಿಸಿದೆ.

  ಸತತ ಎರಡು ಗೆಲುವಿನೊಂದಿಗೆ ಭಾರತ ಸೂಪರ್ 4 ಹಂತಕ್ಕೆ ತೇರ್ಗಡೆ ಯಾಗಿದೆ.ಹೊಸ ಕೋಚ್ ಶೋರ್ಡ್ ಮ್ಯಾರಿಜ್ ಮಾರ್ಗದರ್ಶನದಲ್ಲಿ ಭಾರತ ಇನ್ನೊಂದು ಗೆಲುವಿನೊಂದಿಗೆ ಗ್ರೂಪ್ ಹಂತದ ಎಲ್ಲ ಪಂದ್ಯಗಳಲ್ಲೂ ಗೆಲುವು ದಾಖಲಿಸಲು ನೋಡುತ್ತಿದೆ.

      ಮೊದಲೆರಡು ಪಂದ್ಯಗಳಲ್ಲಿ ಭಾರತದ ಆಟಗಾರರು ಅಪೂರ್ವ ಆಟ ಆಡಿದ್ದರು. ಫೀಲ್ಡ್ ಗೋಲುಗಳ ಕಡೆಗೆ ಹೆಚ್ಚು ಒತ್ತು ನೀಡಿದ್ದರು. ಬಾಂಗ್ಲಾ ವಿರುದ್ಧ 13 ಪೆನಾಲ್ಟಿ ಅವಕಾಶ ಸಿಕ್ಕಿದ್ದರೂ ಕೇವಲ 2 ಗೋಲುಗಳು ಭಾರತದ ಖಾತೆಗೆ ಜಮೆ ಆಗಿತ್ತು. ಮ್ಯಾರಿಜ್ ತಂಡದ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಅವರ ತಂಡಕ್ಕೆ ಮೊದಲ ಕಠಿಣ ಸವಾಲು ಇದೀಗ ಎದುರಾಗಿದೆ. ಲಂಡನ್‌ನಲ್ಲಿ ಕಳೆದ ಜೂನ್‌ನಲ್ಲಿ ನಡೆದ ಹೀರೊ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 6-1 ಅಂತರದಲ್ಲಿ ಮಣಿಸಿತ್ತು. ಈ ಸೋಲು ಪಾಕಿಸ್ತಾನಕ್ಕೆ ಮುಂದಿನ ವರ್ಷ ಭುವನೇಶ್ವರದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ತೇರ್ಗಡೆಯಾಗುವ ಕನಸನ್ನು ಭಗ್ನಗೊಳಿಸಿತ್ತು. ಪಾಕಿಸ್ತಾನ ಇದರಿಂದ ಹತಾಶಗೊಂಡು ಸೇಡು ತೀರಿಸಲು ನೋಡುತ್ತಿದೆ. ಭಾರತ ಮೂರು ಬಾರಿ (1982, 1985, 1989) ಏಷ್ಯಾಕಪ್ ಪ್ರಶಸ್ತಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News