ಸಹಕಾರಿ ಕ್ಷೇತ್ರದಲ್ಲಿ ಯುವಜನರ ಪಾತ್ರ ಹಿರಿದು: ರಾಜೇಂದ್ರ ಕುಮಾರ್‌

Update: 2017-10-15 12:35 GMT

ಮಂಗಳೂರು, ಅ. 15: ಯುವ ಜನಾಂಗ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಮಾರಾಟ ಮಹಾಮಂಡಲ ಅಧ್ಯಕ್ಷ ಡಾ. ಎಂ. ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ವತಿಯಿಂದ ಸಹಕಾರ ಭಾರತಿ ಸಂಸ್ಥಾಪಕ ಲಕ್ಷ್ಮಣರಾವ್ ಇನಾಂದಾರ್ ಅವರ ಜನ್ಮಶತಾಬ್ಧಿ ಅಂಗವಾಗಿ ನಗರದದ ಪುರಭವನದಲ್ಲಿ ರವಿವಾರ ನಡೆದ ಶತಾಬ್ಧಿ ಸಹಕಾರಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಭಾರತಿ ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಕೆಲಸ ಮಾಡಿದ್ದು, ವಿಭಿನ್ನ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಯುವ ಜನಾಂಗ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಹಕಾರ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ಕೊಂಕೋಡಿ ಪದ್ಮನಾಭ ಅವರು, ಸಹಕಾರಿ ಕ್ಷೇತ್ರಕ್ಕೆ ಎದುರಾಗುವ ತೊಡಕು ನಿವಾರಿಸಲು ಎಲ್ಲ ಸಹಕಾರಿಗಳು ಒಟ್ಟಾಗಿ ಹೋರಾಟ ನಡೆಸಬೇಕು. ಸಹಕಾರಿ ಕ್ಷೇತ್ರ ಉಳಿಸಿಕೊಳ್ಳಲು ನಮ್ಮ ಕಾರ್ಯಪದ್ಧತಿ ಬದಲಿಸಿಕೊಳ್ಳಬೇಕು ಎಂದರು.

ದೇಶದಲ್ಲಿ ಇಂದು 6 ಲಕ್ಷ ಸಹಕಾರಿ ಸಂಸ್ಥೆಗಳಿವೆ. ಜನಸಂಖ್ಯೆಯ ಶೇ.20ರಷ್ಟು ಮಂದಿ ಸಹಕಾರಿ ಕ್ಷೇತ್ರದಲ್ಲಿ ಇದ್ದಾರೆ. ಮಹಾರಾಷ್ಟ್ರದಲ್ಲಿ ಆರಂಭಗೊಂಡ ಸಹಕಾರ ಭಾರತಿ ಇಂದು ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ. ಈ ಬೆಳವಣಿಗೆ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಪಾತ್ರ ಹಿರಿದಾಗಿದೆ ಎಂದರು.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮಾತನಾಡಿ, ಸಂಘಟನೆ ಮೂಲಕ ಸಹಕಾರ ಕ್ಷೇತ್ರಕ್ಕೆ ಎದುರಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ರಾಜ್ಯ ಸಹಕಾರ ಮಹಿಳಾ ಮಹಾಮಂಡಳ ನಿರ್ದೇಶಕಿ ಸರಳಾ ಬಿ. ಕಾಂಚನ್, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಬಿ.ಕೆ. ಸಲೀಂ, ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಸಂಜೀವ ಟಿ., ಪ್ರಧಾನ ಕಾರ್ಯದರ್ಶಿ ಕೃಷ್ಣ ಕೊಂಪದವು ಉಪಸ್ಥಿತರಿದ್ದರು.

ಸಮಾವೇಶ ಸಮಿತಿ ಅಧ್ಯಕ್ಷ , ಜಿಪಂ ಸದಸ್ಯ ಸುಚರಿತ ಶೆಟ್ಟಿ ಸ್ವಾಗತಿಸಿದರು. ಸಹಕಾರ ಭಾರತಿ ಕರ್ನಾಟಕ ಸಹ ಸಂಘಟನಾ ಪ್ರಮುಖ್ ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾವೇಶ ಸಮಿತಿ ಕೋಶಾಧಿಕಾರಿ ಎ.ಸುರೇಶ್ ರೈ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News