ಚರ್ಚ್‌ಗಳು ಮನುಷ್ಯ-ದೇವರ ನಡುವಿನ ಕೊಂಡಿ: ಮಂಗಳೂರು ಬಿಷಪ್

Update: 2017-10-15 15:45 GMT

ಕಿನ್ನಿಗೋಳಿ, ಅ. 15: ಚರ್ಚ್‌ಗಳು ಮನುಷ್ಯ ಮತ್ತು ದೇವರ ನಡುವೆ ಸಂಬಂಧ ಕಲ್ಪಿಸುವ ಪುಣ್ಯ ಸ್ಥಳಗಳು. ಕಿನ್ನಿಗೋಳಿಯಲ್ಲಿ ಭಕ್ತರ ತನುಮನ, ಶ್ರದ್ಧೆ, ಭಕ್ತಿಯ ಸಂಪೂರ್ಣ ಸಹಕಾರದಿಂದ ದೇವಾಲಯ ಹೊಸ ರೂಪವನ್ನು ಪಡೆಯುವಂತಾಗಿದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಸಿಯಸ್ ಪಾವ್ಲ್ ಡಿಸೋಜ ಹೇಳಿದರು.

ಅವರು ರವಿವಾರ ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ನವೀಕೃತ ಚರ್ಚ್‌ನ್ನು ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿ ಮಾತನಾಡಿದರು. ಚರ್ಚ್‌ಗಳ ವಿನ್ಯಾಸಗಳನ್ನು ಕಣ್ತುಂಬಿಕೊಂದರೆ ಮಾತ್ರ ಸಾಲದು. ಶುದ್ಧ ಮನಸ್ಸಿನಿಂದ ಶ್ರದ್ಧಾಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ಆತನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಹೆನ್ರಿ ಡಿಸೋಜ ಮಾತನಾಡಿ, ಸಮಾಜದ ಬಡ ವರ್ಗದ ದೀನ ದಲಿತರ, ಅಶಕ್ತರ ಪರವಾಗಿ ಕೆಲಸ ಮಾಡಬೇಕು. ನಮ್ಮ ಸಮುದಾಯದಲ್ಲಿ ದೇಶ ಸೇವೆ , ಸಮಾಜ ಸೇವೆ, ಧಾರ್ಮಿಕ ಸೇವೆ ಮಾಡಬಲ್ಲ ಯುವ ನಾಯಕರು ಹುಟ್ಟಿಬರಬೇಕು. ಅದಕ್ಕಾಗಿ ಇಂದಿನಿಂದಲೇ ಅಣಿಯಾಗಬೇಕಿದೆ. ನಾವು ಹಗಲು ಕನಸು ಕಾಣುವ ಬದಲು ಸಾಧನೆಗೆ ಪ್ರೇರಣೆಯಾಗಬಲ್ಲ ಕನಸುಗಳನ್ನು ಕಾಣುತ್ತಾ ಅದನ್ನು ನನಸಾಗಿಸುವಲ್ಲಿ ಶ್ರಮಿಸಬೇಕು ಎಂದರು.

ಚರ್ಚ್‌ನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಅಭಯಚಂದ್ರ ಜೈನ್, ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮವನ್ನು ಸೇರಿಸಿಕೊಂಡು ಕಿನ್ನಿಗೋಳಿಯನ್ನು ನಗರ ಪಂಚಾಯತ್ ಮಾಡುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದರು.

ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್, ಕಾನ್ವೆಂಟ್‌ನ ಸೂಪಿಯರ್ ಸಿ. ಜೋತ್ನ್ಸಾ , ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ವಿನ್ಸಂಟ್ ಮಥಾಯಸ್, ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉಸಪ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಿನ್ನಿಗೋಳಿ ದೇವಾಲಯ ಸಹಾಯಕ ಧರ್ಮಗುರುಗಳಾದ , ಫಾ. ಜಾರ್ಜ್ ಕ್ರಾಸ್ತ, ಫಾ. ಸುನಿಲ್ ಪ್ರವೀಣ್ ಪಿಂಟೊ, ಫಾ. ಅಶೋಕ್ ರಾಯನ್ ಕ್ರಾಸ್ತ್ ಅವರನ್ನು ಗೌರವಿಸಲಾಯಿತು.  ಚರ್ಚ್ ನವೀಕರಣದಲ್ಲಿ ಧನ ಸಹಾಯ ನೀಡಿದ ಧಾನಿಗಳನ್ನು, ಗುತ್ತಿಗೆದಾದರನ್ನು ಗೌರವಿಸಲಾಯಿತು.

ಚರ್ಚ್‌ನ ಪ್ರಧಾನ ಧರ್ಮಗುರು ಫಾ. ವಿನ್ಸೆಂಟ್ ಮೊಂತೇರೆ ಸ್ವಾಗತಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ ವಂದಿಸಿದರು. ಶಿಕ್ಷಕಿ ಅನಿತಾ ಡಿಸೋಜ ಹಾಗೂ ವಿಲಿಯಂ ಡಿಸೋಜ ಕಾರ್ಯುಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News