ಸಹಕಾರಿ ಸಂಘಗಳು ರೈತರ ಅಭಿವೃದ್ಧಿಗೆ ಪಣ ತೊಡಬೇಕು: ರಮಾನಾಥ ರೈ

Update: 2017-10-15 16:52 GMT

ಉಳ್ಳಾಲ, ಅ. 15: ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್ ಜಿಲ್ಲೆಯು ಕ್ರಾಂತಿಯನ್ನು ಮಾಡಿದೆ. ಸಹಕಾರಿ ಬ್ಯಾಂಕ್‌ಗಳು ಇಂದು ಉತ್ತಮ ವ್ಯವಹಾರದಿಂದಾಗಿ ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆಯೇ ಪೈಪೋಟಿ ನೀಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ ಎಂದು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರು ಹೇಳಿದರು. ಅವರು ಕೋಟೆಕಾರ್ ಬೀರಿಯಲ್ಲಿ ಭಾನುವಾರ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರದಾನ ಕಚೇರಿಯ ನವೀಕೃತ ಕಟ್ಟಡ ಹಾಗೂ ರೈತಸದನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘಗಳು ಸಹಕಾರಿ ಸಿದ್ದಾಂತದೊಂದಿಗೆ ರೈತರ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖವಾದ ಅನಿವಾರ್ಯತೆ ಇದೆ. ಪ್ರಮುಖವಾಗಿ ಸಾಮಾನ್ಯ ಜನರು ಇಂದಿಗೂ ಸಹಕಾರಿ ಸಂಘಗಳನ್ನೇ ನಂಬಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘವು ಹಲವಾರು ವರ್ಷಗಳಿಂದ ಈ ಭಾಗದ ರೈತರ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಬ್ಯಾಕಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಜನಸಾಮಾನ್ಯರ ಕೊಂಡಿಯಾಗಿದ್ದುಕೊಂಡು ಅವರಿಗೆ ಸಿಗಬೇಕಾದ ವಿವಿಧ ಯೋಜನೆಗಳನ್ನು  ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65000 ಜನರಿಗೆ ಸಾಲ ಮನ್ನಾ ಕಾರ್ಯಕ್ರಮ ಅನುಷ್ಠಾನ ಮಾಡಿ ಯಶಸ್ವಿಯಾಗಿದೆ. ಸಹಕಾರಿ ಸಂಘಗಳು ಹತ್ತು ಜನರು ಸೇರಿಕೊಂಡು ನಿರ್ಮಾಣ ಮಾಡುವ ಸಂಸ್ಥೆಯಾಗಿರುವುದರಿಂದ ಊರಿನ ಜನರು ಹೆಚ್ಚು ವಿಶ್ವಾಸಯುತವಾಗಿ ವ್ಯವಹರಿಸಲು ಸಹಕಾರಿಯಾಗುತ್ತದೆ. ಕೋಟೆಕಾರ್ ವ್ಯವಸಾಯ ಸೇವಾ ಸಂಘದ ಕಳೆದ 60 ವರ್ಷದಿಂದ ಜನರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಮುನ್ನಡೆಯುತ್ತಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಸಹಕಾರಿ ಸಂಘಗಳು ಎಲ್ಲರೂ ಒಳಗೊಳ್ಳುವಿಕೆಯ ಮೂಲಕ ಜನರೊಂದಿಗೆ ವಿಶ್ವಾಸಯುತವಾಗಿ ವ್ಯವಹರಿಸಿ ಮುನ್ನಡೆಯುತ್ತಿದೆ. ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು ಈ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಉತ್ತಮ ಬ್ಯಾಂಕ್ ಆಗಿ ಮೂಡಿಬರಲಿ ಎಂದು ಹಾರೈಸಿದರು. ಕೋಟೆಕಾರ್ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಿಪಿಐಎಂ ಹಿರಿಯ ನಾಯಕ ಕೆ.ಆರ್. ಶ್ರೀಯಾನ್, ಎಐಎಂಐಟಿ ನಿರ್ದೇಶಕ ಫಾ ಡೆಂಝಿಲ್ ಲೋಬೋ ಎಸ್.ಜೆ., ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ.ಉಚ್ಚಿಲ್. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿ. ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಡಾ ಎಂ.ಎಂ.ಎನ್.ರಾಜೇಂದ್ರ ಕುಮಾರ್, ಕೋಟೆಕಾರು ವ್ಯವಸಾಯ ಸೇವಾ ಸಂಘದ ತಲಪಾಡಿ ಶಾಖೆ ದರೋಡೆ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ ರಾಮಚಂದ್ರ ಆಚಾರ್ಯ ಮತ್ತು ಅವರಿಗೆ ಸಹಕರಿಸಿದ ಸ್ಥಳೀಯ ನಿವಾಸಿ ಹರೀಶ್ ಶೆಟ್ಟಿ ಪಂಜಿಮುಂಡೇಲು, ರೈತಸದನ ಕಟ್ಟಡದ ಇಂಜಿನಿಯರ್ ದೇವದಾಸ್, ಕಟ್ಟಡ ನಿರ್ಮಾಣ ಮೇಲ್ವಿಚಾರಕ ಕೆ.ಬಿ. ಅಬ್ಬುಸಾಲಿ ಅವರನ್ನು ಸನ್ಮಾನಿಸಲಾಯಿತು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಯು., ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಉದಯ ಕುಮಾರ್ ಶೆಟ್ಟಿ, ಯು. ಅರುಣ್ ಕುಮಾರ್, ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ನಾರಾಯಣ ತಲಪಾಡಿ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

 ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಸ್ವಾಗತಿಸಿದರು. ನಿರ್ದೇಶಕ ಕೆ. ಕೃಷ್ಣಪ್ಪ ಸಾಲ್ಯಾನ್ ಪ್ರಸ್ತಾವನೆಗೈದರು. ಪೊಸಕುರಲ್‌ನ ನಿರ್ದೇಶಕ ವಿದ್ಯಾಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‌ಸಿಬ್ಬಂದಿ ಲೋಕಯ್ಯ ಪನೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News