ಅಮೆರಿಕ ತಂಡಕ್ಕೆ ಪರಾಗ್ವೆ ಸವಾಲು

Update: 2017-10-15 18:03 GMT

ಹೊಸದಿಲ್ಲಿ, ಅ.15: ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಸೋಮವಾರ ನಡೆಯಲಿರುವ ಎರಡನೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪರಾಗ್ವೆ ತಂಡ ಅಮೆರಿಕವನ್ನು ಎದುರಿಸಲಿದೆ.

ಗ್ರೂಪ್ ಹಂತದಲ್ಲಿ ಎಲ್ಲ ಮೂರೂ ಪಂದ್ಯಗಳನ್ನು ಜಯಿಸುವ ಮೂಲಕ ಅಂತಿಮ-16ರ ಸುತ್ತು ಪ್ರವೇಶಿಸಿರುವ ಪರಾಗ್ವೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಪರಾಗ್ವೆ ಮೂರು ರೌಂಡ್ ರಾಬಿನ್ ಪಂದ್ಯಗಳಲ್ಲಿ ಒಟ್ಟು 10 ಗೋಲುಗಳನ್ನು ಬಾರಿಸಿ ಗಮನ ಸೆಳೆದಿದೆ. ಮಾಲಿ ವಿರುದ್ಧ 3-2 ರಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಪರಾಗ್ವೆ ತನ್ನ ಎರಡನೆ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು 4-2 ರಿಂದ ಸೋಲಿಸಿತ್ತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟರ್ಕಿಯನ್ನು 3-1 ರಿಂದ ಮಣಿಸಿತ್ತು. ಮತ್ತೊಂದೆಡೆ ಅಮೆರಿಕ ತಂಡ ಭಾರತವನ್ನು 3-0 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿದ್ದರೂ ತನ್ನ 2ನೆ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ 1-3 ಅಂತರದಿಂದ ಸೋತಿತ್ತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಘಾನಾ ತಂಡವನ್ನು 1-0 ಅಂತರದಿಂದ ಮಣಿಸಲು ಸಫಲವಾಯಿತು.

ಟೂರ್ನಮೆಂಟ್‌ನಲ್ಲಿ ಪರಾಗ್ವೆ ಪ್ರದರ್ಶನವನ್ನು ನೋಡಿದರೆ ಅಮೆರಿಕಕ್ಕೆ ಅಂತಿಮ-16ರ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗುವುದು ಖಚಿತ. ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಅಮೆರಿಕ ಸ್ಟಾರ್ ಫಾರ್ವರ್ಡ್ ವೆಂಡರ್ ಬ್ರೆಮೆನ್ ಅವರನ್ನು ಅವಲಂಬಿಸಿದೆ.

ಅಮೆರಿಕದ ಹಿರಿಯರ ಫುಟ್ಬಾಲ್ ತಂಡ 2018ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಅಮೆರಿಕದ ಫುಟ್ಬಾಲ್ ಅಭಿಮಾನಿಗಳು ಕಿರಿಯ ಆಟಗಾರರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News