ಸೌಹಾರ್ದತೆ ನಮ್ಮ ಮನಸ್ಸಿಂದಲೇ ಪ್ರಾರಂಭವಾಗಲಿ: ಯು.ಟಿ.ಖಾದರ್

Update: 2017-10-16 10:13 GMT

ವಿಟ್ಲ, ಅ. 16: ಸೌಹಾರ್ದ, ಸಾಮರಸ್ಯತೆ ಕೇವಲ ಮಾತು ಕೃತಿಗೆ ಸೀಮಿತವಾಗಬಾರದು. ಅದು ಮನಸ್ಸಿನಾಳದಿಂದ ಬರಬೇಕು. ನಂತರ ಮನೆಯಲ್ಲಿ ನಿರೂಪಿಸಬೇಕು. ಆವಾಗ ತನ್ನಿಂತಾನೇ ಸಮಾಜದಲ್ಲಿ ಅಳವಡಿಕೆಯಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್ ಹೇಳಿದರು.

ರವಿವಾರ ರಾತ್ರಿ ವಿಟ್ಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದ ದಿವಂಗತ ಹಾಜಿ. ಪಿ.ಕೆ. ಮೊಯ್ದಿನಬ್ಬ ವೇದಿಕೆಯಲ್ಲಿ ನಡೆದ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ 317 ಡಿ ಜಿಲ್ಲಾ ಮಟ್ಟದ "ಈದ್ ಜಲ್ಸಾ" ಹಾಗೂ ಹೋನೆಸ್ಟ್ ಫ್ಯಾಮಿಲಿ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು  ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರಧಾನ ಭಾಷಣಗಾರ, ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ  ಮಾತನಾಡಿ ಇಂದು ಧರ್ಮದ ವಿಭಜನೆಯಿಂದಾಗಿ ಸಾಮರಸ್ಯ ಕದಡುತ್ತಿದೆ. ಧಾರ್ಮಿಕ ನಂಬಿಕೆಗಳು ಅಪವಿತ್ರಗೊಳ್ಳುತ್ತಿದೆ. ಪರಸ್ಪರ ಅರಿತು ಬಾಳುವ ಹಿಂದಿನ ತಲೆಮಾರಿನ ಸುಂದರ ಜೀವನ ಮರೆಯಾಗಿದೆ. ಈ ನಿಟ್ಟಿನಲ್ಲಿ ಈದ್, ದೀಪಾವಳಿ, ಕ್ರಿಸ್ಮಸ್ ಮೊದಲಾದ ಹಬ್ಬಗಳು ಪರಸ್ಪರ ಕೊಡು ಕೊಳ್ಳುವಿಕೆಯ, ಐಕ್ಯತೆ ಮೂಡಿಸುವ ಸಂಭ್ರಮವಾಗಬೇಕು. ಈದ್ ಹಬ್ಬವು ಸಮಾಜ ಸುಧಾರಣೆಗೆ, ಇತರರನ್ನು ಅರಿಯುವುದಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದು ಹೇಳಿದರು.

ಲಯನ್ಸ್ 317 ಡಿ ಇದರ ಜಿಲ್ಲಾ ಗವರ್ನರ್ ಹೆಚ್.ಆರ್. ಹರೀಶ್ ಅವರು ದಫ್ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಯನ್ಸ್ ಜಿಲ್ಲಾ ಈದ್ ವಿಭಾಗದ ಕೋ ಆರ್ಡಿನೇಟರ್ ಮುಹಮ್ಮದ್ ಇಕ್ಬಾಲ್ ಹೋನೆಸ್ಟ್ ಅವರು ಸಭಾಧ್ಯಕ್ಷತೆ ವಹಿಸಿದರು. ಇದೇ ಸಂದರ್ಭ ಗವರ್ನರ್ ಅವರು ಸಚಿವ ಯು.ಟಿ.ಖಾದರ್ ಹಾಗೂ ಮುಹಮ್ಮದ್ ಇಕ್ಬಾಲ್ ಹೋನೆಸ್ಟ್ ಅವರನ್ನು ಜಿಲ್ಲಾ ಲಯನ್ಸ್ ಪರವಾಗಿ ಸನ್ಮಾನಿಸಿದರು. ಹೋನೆಸ್ಟ್ ಫ್ಯಾಮಿಲಿ ಪರವಾಗಿ ಮನ್ಸೂರ್ ಹಾಗೂ ಮಕ್ಬೂಲ್ ಅವರು ಯು.ಟಿ.ಖಾದರ್ ಹಾಗೂ ಗವರ್ನರ್ ಹೆಚ್.ಆರ್. ಹರೀಶ್ ಅವರನ್ನು ಗೌರವಿಸಿದರು.

2017 ರ ಈದ್ ಜಿಲ್ಲಾ ನಗದು ಸಹಿತ ವಿಶೇಷ ಪ್ರಶಸ್ತಿಯನ್ನು ಏಡ್ಸ್ ಮಕ್ಕಳಿಗೆ ಆಶ್ರಯ ನೀಡಿ ಪೋಷಿಸುತ್ತಿರುವ ಮಂಗಳೂರು ಬಿಜೈಯ ಸ್ನೇಹದೀಪ್ ಸಂಸ್ಥೆಯ ಸ್ಥಾಪಕಿ ತಬಸ್ಸುಮ್ ಅವರಿಗೆ ನೀಡಿ ಪುರಸ್ಕರಿಸಲಾಯಿತು. ಈ ಸಂದರ್ಭ ವಿಟ್ಲ ಲಯನ್ಸ್ ವತಿಯಿಂದ ವಿನ್ನಿ ಮಸ್ಕರೇನಸ್ ಪ್ರಾಯೋಜಿಸಿರುವ ಮನೆಯ ಕೀ ಯನ್ನು ವಿ.ಸುಮಯ್ಯ ಮಂಗಿಲಪದವು ಅವರಿಗೆ ಹಸ್ತಾಂತರಿಸಲಾಯಿತು.

ಲಯನ್ಸ್ ಪ್ರಥಮ ಮಹಿಳೆ ನಮಿತಾ ಹರೀಶ್, ಜಿಲ್ಲಾ ಉಪ ರಾಜ್ಯಪಾಲರಾದ ದೇವದಾಸ್ ಭಂಡಾರಿ, ರೊನಾಲ್ಡ್ ಐಸಾಕ್ ಗೋಮ್ಸ್, ಕ್ಯಾಬಿನೆಟ್ ಕಾರ್ಯ ದರ್ಶಿ ವಸಂತ ಶೆಟ್ಟಿ, ಉಪ ಕೋಶಾಧಿಕಾರಿ ಎಂ.ಸಿ. ಶೆಟ್ಟಿ, ಲಯನ್ಸ್ ಕಾರ್ಯಕ್ರಮ ವಿಭಾಗದ ಸಂಯೋಜಕ ಪ್ರಶಾಂತ್ ಪೈ. ಜಿ., ಜಿಲ್ಲಾ ಲಯನೆಸ್ ಅಧ್ಯಕ್ಷೆ ದಾಕ್ಷಾಯಿಣಿ ಶ್ರೀನಿವಾಸ್, ಈದ್ ವಿಭಾಗದ ಚೆಯರ್ ಪರ್ಸನ್ ಅಬ್ದುಲ್ ಖಾದರ್, ಲಯನೆಸ್ ಈದ್ ಸಂಯೋಜಕಿ ಮೀನಾಕ್ಷಿ ಖಾದರ್, ಈದ್ ಚೆಯರ್ ಪರ್ಸನ್ ರಾಹತುನ್ನಿಸಾ, ಲೆಗಸಿ ಪ್ರಾಜೆಕ್ಟ್ ಸಂಯೋಜಕ ಡಾ.ಗೀತಪ್ರಕಾಶ್, ಜಿ.ಆರ್.ಆರ್. ವಿಟ್ಲ ಮಂಗೇಶ್ ಭಟ್, ಪ್ರಾಂತ್ಯಾಧ್ಯಕ್ಷ ಜಯರಾಮ್, ವಲಯಾಧ್ಯಕ್ಷ ವಿ. ಸುದರ್ಶನ್ ಪಡಿಯಾರ್, ಲಯನ್ಸ್ ಗ್ರಾಮೀಣ ಪಿ.ಆರ್.ಓ. ಡಾ.ಐ.ಎಸ್. ಶೆಟ್ಟಿ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿನ್ನಿ ಮಸ್ಕರೇನಸ್, ಲಯನೆಸ್ ಅಧ್ಯಕ್ಷೆ ಭಾರತಿ, ಲಿಯೋ ಅಧ್ಯಕ್ಷೆ ಜಾಸ್ಮಿನ್, ಸಫಿಯಾ ಇಕ್ಬಾಲ್ ಅವರು ವೇದಿಕೆಯಲ್ಲಿದ್ದರು.

ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಪೂರ್ವಾಧ್ಯಕ್ಷ ಅಬೂಬಕರ್ ವಿಟ್ಲ ಕಿರಾಅತ್ ಪಠಿಸಿದರು. ಸತೀಶ್ ಆಳ್ವ ಲಯನ್ಸ್ ಪ್ರಾರ್ಥನೆ ಮಾಡಿದರು. ಲಯನ್ಸ್ ಕಾರ್ಯದರ್ಶಿ ಗಂಗಾಧರ ಧ್ವಜವಂದನೆಗೈದರು. ರಾಹತುನ್ನಿಸಾ ನೀತಿ ಸಂಹಿತೆ ವಾಚಿಸಿದರು. ಮೀನಾಕ್ಷಿ ಖಾದರ್ ವಂದಿಸಿದರು.

ಗೋಳ್ತ ಮಜಲು ಜೆಮ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳ ಕೋಲ್ಕಲಿ, ಒಪ್ಪಣ, ಗಝಲ್ ಹಾಗೂ ಕೆಲಿಂಜ ಹಯಾತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳ ದಫ್ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News