ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ‘ಜುಮ್ಲಾಗಳ ಮಳೆ’ ಸುರಿಯಲಿದೆ
ಹೊಸದಿಲ್ಲಿ, ಅ.16: “ಹವಾಮಾನ ವರದಿ: ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಗುಜರಾತ್ ನಲ್ಲಿ ಜುಮ್ಲಾಗಳ ಮಳೆ ಸುರಿಯಲಿದೆ”… ಇಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರನ್ನು ರಾಹುಲ್ ಗಾಂಧಿ ಕುಟುಕಿದ್ದು ಹೀಗೆ.
ಇದೇ ರೀತಿ ಇನ್ನೊಂದು ಟ್ವೀಟ್ ಅನ್ನು ಕೂಡ ರಾಹುಲ್ ಪೋಸ್ಟ್ ಮಾಡಿದ್ದು, “ಚುನಾವಣಾ ದಿನಾಂಕವನ್ನು ಎದುರು ನೋಡುತ್ತಿರುವ ಗುಜರಾತ್ 12,500 ಕೋಟಿ ರೂ. ಮೊತ್ತದ ಯೋಜನೆಗಳನ್ನು ಗಿಟ್ಟಿಸಿಕೊಂಡಿದೆ” ಎನ್ನುವ ಹಿಂದೂಸ್ತಾನ್ ಟೈಮ್ಸ್ ನ ವರದಿಯನ್ನೂ ಅವರು ಟ್ಯಾಗ್ ಮಾಡಿದ್ದಾರೆ.
ಹಿಮಾಚಲ ಪ್ರದೇಶ ಹಾಗು ಗುಜರಾತ್ ನಲ್ಲಿ ಏಕಕಾಲದಲ್ಲಿ ಚುನಾವಣಾ ದಿನಾಂಕ ಘೋಷಿಸದಂತೆ ಬಿಜೆಪಿ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹಿಮಾಚಲ ಪ್ರದೇಶದೊಂದಿಗೆ ಗುಜರಾತ್ ಗೂ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಿಸಿದ್ದರೆ ತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆ ಜಾರಿಗೆ ಬರಲಿದೆ. ಇದರಿಂದಾಗಿ ಯಾವುದೇ ಯೋಜನೆಗಳನ್ನು ಘೋಷಿಸಲು, ಆಶ್ವಾಸನೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.