ತನಿಖೆಯಲ್ಲಿ ಅಸಡ್ಡೆ: ಸಿಬಿಐಯನ್ನು ತರಾಟೆಗೆತ್ತಿಕೊಂಡ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ, ಅ.16: ಕಾಣೆಯಾಗಿರುವ ಜೆಎನ್‌ಯು(ಜವಾಹರ್‌ಲಾಲ್ ನೆಹರೂ ವಿವಿ) ವಿದ್ಯಾರ್ಥಿ ನಜೀಬ್ ಅಹ್ಮದ್‌ರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಅಸಡ್ಡೆ ತೋರಲಾಗುತ್ತಿದೆ ಎಂದು ದಿಲ್ಲಿ ಹೈಕೋರ್ಟ್ ಸಿಬಿಐಯನ್ನು ತರಾಟೆಗೆತ್ತಿಕೊಂಡಿದೆ.
ಸಿಬಿಐ ಸಲ್ಲಿಸಿದ ತನಿಖಾ ಕಾರ್ಯದ ಪ್ರಗತಿ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಸ್ತಾನಿ ಮತ್ತು ಚಂದ್ರಶೇಖರ್ ಅವರಿದ್ದ ನ್ಯಾಯಪೀಠವು, ಈ ವರದಿಯಲ್ಲಿ ಯಾವುದೇ ಖಚಿತ ಫಲಿತಾಂಶದ ಸುಳಿವಿಲ್ಲ. ಇದು ಪ್ರಕರಣದ ಬಗ್ಗೆ ಸಿಬಿಐಗೆ ಇರುವ ನಿರಾಸಕ್ತಿಯ ದ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟಿತು.
ಪ್ರಕರಣದಲ್ಲಿ ಶಂಕಿತ ವಿದ್ಯಾರ್ಥಿಗಳ ದೂರವಾಣಿ ಕರೆ, ಸಂದೇಶ ಇತ್ಯಾದಿಗಳ ಬಗ್ಗೆ ಸಿಬಿಐ ಸಲ್ಲಿಸಿದ ತನಿಖಾ ವರದಿಯಲ್ಲಿ ಅಸಂಗತತೆ ಇರುವುದನ್ನು ಗಮನಿಸಿದ ನ್ಯಾಯಪೀಠ ಈ ಅಭಿಪ್ರಾಯಕ್ಕೆ ಬಂದಿದೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಹೊಡೆದಾಟದ ಬಳಿಕ ನಜೀಬ್ ವಿವಿ ಆವರಣದಿಂದ ನಿಗೂಢವಾಗಿ ನಾಪತ್ತೆಯಾಗಿ ಒಂದು ವರ್ಷ ಕಳೆದಿದೆ. ಈ ಮಧ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ದಿಲ್ಲಿ ಪೊಲೀಸರ ವಶದಿಂದ ಸಿಬಿಐಗೆ ವರ್ಗಾಯಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಸಿಬಿಐ ಪ್ರಕರಣದ ಕುರಿತ ಹೊಸ ತನಿಖಾ ವರದಿಯನ್ನು ಸಲ್ಲಿಸಲು ವಿಫಲವಾಗಿರುವುದನ್ನು ಆಕ್ಷೇಪಿಸಿದ್ದ ಹೈಕೋರ್ಟ್, ಸಿಬಿಐಗೆ ತನಿಖೆ ವಹಿಸಿರುವುದು ತಮಾಷೆಗಾಗಿ ಅಲ್ಲ ಎಂದು ತಿಳಿಸಿತ್ತು.