ಆಹಾರ ಸಿಗದೆ ಹಸಿವೆಯಿಂದ ಚಡಪಡಿಸಿ ಮೃತಪಟ್ಟ ಬಾಲಕಿ: ಆರೋಪ
ಹೊಸದಿಲ್ಲಿ, ಅ.16: ಆಧಾರ್ ನಂಬರ್ ಲಿಂಕ್ ಮಾಡದೆ ಇದ್ದುದರಿಂದ ಕುಟುಂಬವೊಂದರ ಪಡಿತರ ಚೀಟಿ ರದ್ದಾದ ಪರಿಣಾಮ ಪಡಿತರ ಸಿಗದೆ ಹಸಿವೆಯಿಂದ 11 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಆಹಾರದ ಹಕ್ಕು ಆಂದೋಲನದ ಕಾರ್ಯಕರ್ತರು ಆರೋಪಿಸಿದ್ದಾರೆ.
ದುರ್ಗಾ ಪೂಜೆಯ ರಜಾದಿನಗಳಲ್ಲಿ ಶಾಲೆಯ ಬಿಸಿಯೂಟವಿಲ್ಲದೆ 11 ವರ್ಷದ ಸಂತೋಷಿ ಕುಮಾರಿ 8 ದಿನಗಳ ಕಾಲ ಹಸಿವೆಯಿಂದಿದ್ದು ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಜಾರ್ಖಂಡ್ ನ ಸಿಮ್ದೇಗಾದ ಕರಿಮತಿ ಗ್ರಾಮದ ಬಾಲಕಿ ಸಂತೋಷಿ ಕುಮಾರಿಯದ್ದು ಬಡ ಕುಟುಂಬ. ಭೂಮಿಯಿಲ್ಲದ, ಉದ್ಯೋಗ, ಸರಿಯಾದ ಆದಾಯವಿಲ್ಲದ ಬಾಲಕಿಯ ಕುಟುಂಬ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಿಗುವ ಪಡಿತರವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿತ್ತು. ಆಧಾರ್ ನಂಬರನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡದೆ ಇದ್ದುದಕ್ಕಾಗಿ ಸ್ಥಳೀಯ ಪಡಿತರ ಡೀಲರ್ ಈ ಕುಟುಂಬಕ್ಕೆ ಪಡಿತರ ಆಹಾರ ಸಾಮಗ್ರಿಗಳನ್ನು ನೀಡಲು ನಿರಾಕರಿಸಿದ್ದ. ಆರು ತಿಂಗಳಿನಿಂದ ಕುಟುಂಬಕ್ಕೆ ಯಾವುದೇ ಪಡಿತರ ಲಭಿಸಿರಲಿಲ್ಲ ಎಂದು ಸ್ಥಳೀಯ ಪತ್ರಿಕೆಯೊಂದು ಆಹಾರ ಹಕ್ಕು ಆಂದೋಲನದ ಕಾರ್ಯಕರ್ತರು ಆರೋಪಿಸಿದ್ದಾರೆ ಎಂದು ವರದಿ ಮಾಡಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನುದಾನಿತ ಆಹಾರ ಸಾಮಗ್ರಿಗಳು ಸಿಗಲು ಆಧಾರ್ ಕಡ್ಡಾಯ ಎಂದು ಕೇಂದ್ರ ಸರಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಈ ಘಟನೆ ಸರಕಾರಿ ಕಲ್ಯಾಣ ಯೋಜನೆಗಳನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.
ಸೆಪ್ಟಂಬರ್ 28ರಂದು ಸಂತೋಷಿ ಕುಮಾರಿ ಹಸಿವೆಯಿಂದ ಮೃತಪಟ್ಟಿದ್ದಾಳೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆಂದು ಕಾರ್ಯಕರ್ತರು ಹೇಳುತ್ತಾರೆ. ದುರ್ಗಾ ಪೂಜೆಯ ರಜೆಯ ಸಂದರ್ಭ ಮಧ್ಯಾಹ್ನದ ಊಟ ಇಲ್ಲದೆ ಸಂತೋಷಿ ಹಸಿವೆಯಿಂದ ಚಡಪಡಿಸಿದ್ದಳು. ಸೆಪ್ಟಂಬರ್ 27ರಂದು ಹೊಟ್ಟೆನೋವಿನ ಬಗ್ಗೆ ಹೆತ್ತವರಲ್ಲಿ ಹೇಳಿದ್ದ ಬಾಲಕಿ 24 ಗಂಟೆಗಳೊಳಗಾಗಿ ಮೃತಪಟ್ಟಿದ್ದಳು ಎನ್ನಲಾಗಿದೆ.
ಬಾಲಕಿಯ ತಂದೆ ದುಡಿಯುವ ಸ್ಥಿತಿಯಲ್ಲಿಲ್ಲ. ತಾಯಿ ಕೊಯ್ಲಿ ದೇವಿ ಹಾಗು ಆಕೆಯ ಹಿರಿಯ ಪುತ್ರಿ ನೀಮ್ ಕೊಂಬೆಗಳನ್ನು ಮಾರಿ ವಾರಕ್ಕೆ 80 ರೂ.ಗಳನ್ನು ಗಳಿಸುತ್ತಾರೆ. ಜಾನುವಾರುಗಳನ್ನು ಮೇಯಿಸಿದ್ದಕ್ಕಾಗಿ ಗ್ರಾಮಸ್ಥರು ಅಕ್ಕಿಯನ್ನು ನೀಡುತ್ತಿದ್ದರು. ಸಂತೋಷಿಯ ಸಹೋದರನಿಗೆ ಸ್ಥಳೀಯ ಅಂಗನವಾಡಿಯಲ್ಲಿ ಆಹಾರ ಲಭಿಸುತ್ತಿದ್ದು, ಅದನ್ನೇ ಕುಟುಂಬಸ್ಥರು ಹಂಚಿಕೊಂಡು ತಿನ್ನುತ್ತಿದ್ದರು ಎನ್ನಲಾಗಿದೆ.