ಧಾರ್ಮಿಕ ಸೌಹಾರ್ದವನ್ನು ನಾಶಗೈಯಲು 'ಲವ್ ಜಿಹಾದ್' ಘೋಷಣೆ ಹುಟ್ಟುಹಾಕಲಾಗಿದೆ: ಪಿಣರಾಯಿ ವಿಜಯನ್
ಹೊಸದಿಲ್ಲಿ, ಅ.16: ಕೇರಳದಲ್ಲಿ ಶತಮಾನಗಳಿಂದ ಬೇರೂರಿರುವ ಧಾರ್ಮಿಕ ಸೌಹಾರ್ದವನ್ನು ನಾಶಪಡಿಸಲು ಲವ್ ಜಿಹಾದ್ ಎನ್ನುವ ಘೋಷಣೆಯನ್ನು ಹುಟ್ಟುಹಾಕಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ದಿಲ್ಲಿಯ ಯೂನಿಯನ್ ಆಫ್ ಜರ್ನಲಿಸ್ಟ್ ನ್ಯಾಶನಲ್ ಅಲಯನ್ಸ್ ಆಫ್ ಜರ್ನಲಿಸ್ಟ್ ಆಯೋಜಿಸಿದ್ದ ಮಾಧ್ಯಮ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇರಳಕ್ಕೆ ಕೆಟ್ಟ ಹೆಸರು ತರಲು ಮಾಧ್ಯಮಗಳಲ್ಲಿ ಯೋಜನಾಬದ್ಧವಾಗಿ ವರದಿ ಪ್ರಕಟವಾಗುತ್ತಿದೆ. ಆದರೆ ಕೇರಳದ ಜನರು ಈ ದುರುದ್ದೇಶದ ಪ್ರಚಾರವನ್ನು ಮನಗಂಡು ಆರೆಸ್ಸೆಸ್‍ನ ಯೋಜನೆಯನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ವೆಂಗರಾ ಉಪಚುನಾವಣೆಯ ಸಮಯದಲ್ಲಿ ಪ್ರಚೋದಕ ಘೋಷಣೆಗಳೊಂದಿಗೆ ಜನರಕ್ಷಾ ಯಾತ್ರೆ ನಡೆಸಿದರೂ ಕೇರಳದಲ್ಲಿ ಬಿಜೆಪಿಯ ಸ್ಥಾನ ಎಲ್ಲಿದೆ ಎನ್ನುವುದನ್ನು ಫಲಿತಾಂಶ ತೋರಿಸಿಕೊಟ್ಟಿತು. ಕೋಮುಧ್ರುವೀಕರಣದ ಎಲ್ಲ ಕೆಟ್ಟ ತಂತ್ರಗಳನ್ನು ಬಳಸಿದರೂ ಬಿಜೆಪಿಯ ಮತಗಳ ಸಂಖ್ಯೆ ದಿಢೀರ್ ಕುಸಿತವಾಗಿದ್ದು, ನಾಲ್ಕನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕೇರಳದಲ್ಲಿ ಬಿಜೆಪಿಯ ಆಟ ನಡೆಯುವುದಿಲ್ಲ ಎನ್ನುವುದಕ್ಕೆ ಇದು ಸೂಚನೆ ಮತ್ತು ಎಚ್ಚರಿಕೆಯಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.