ಬೌದ್ಧ ಗುಂಪುಗಳ ಹಿಂಸಾಚಾರ: ಸಾವಿರಾರು ರೊಹಿಂಗ್ಯಾರ ಪಲಾಯನ

Update: 2017-10-16 15:41 GMT

ಢಾಕಾ (ಬಾಂಗ್ಲಾದೇಶ), ಅ. 16: ಹಸಿದ, ಹೆದರಿದ ಮತ್ತು ನಿರ್ಗತಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ಸೋಮವಾರ ಮುಂಜಾನೆ ಸಾವಿರಾರು ಸಂಖ್ಯೆಯಲ್ಲಿ ಮ್ಯಾನ್ಮಾರ್‌ನಿಂದ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಈ ಬಾರಿ ಬೌದ್ಧ ಗುಂಪುಗಳ ದಾಳಿಯಿಂದ ತಪ್ಪಿಸಿಕೊಂಡು ಹಾಗೂ ಹಸಿವಿನಿಂದ ಕಂಗೆಟ್ಟು ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶದ ಕದ ತಟ್ಟಿದ್ದಾರೆ.

ಮ್ಯಾನ್ಮಾರ್‌ನ ಬುತಿಡಾಂಗ್ ವಲಯದಿಂದ ಮಕ್ಕಳನ್ನು ಪಕ್ಕೆಗೆ ಕಟ್ಟಿಕೊಂಡು ಪೊದೆಗಳ ಮೂಲಕ ನಡೆಯುತ್ತಾ, ತುಂಬಿ ಹರಿಯುತ್ತಿರುವ ಕಾಲುವೆಗಳನ್ನು ದಾಟಿಕೊಂಡು ಗಡಿವರೆಗೆ ಬಂದ ಬಗೆಯನ್ನು ರೊಹಿಂಗ್ಯಾ ನಿರಾಶ್ರಿತರು ‘ರಾಯ್ಟರ್ಸ್’ಗೆ ವಿವರಿಸಿದರು.

ರೊಹಿಂಗ್ಯಾ ನಿರಾಶ್ರಿತರ ಸುದೀರ್ಘ ಸಾಲು ಪಲೊಂಗ್‌ಖಾಲಿ ಗ್ರಾಮದ ಸಮೀಪ ಬಾಂಗ್ಲಾದೇಶವನ್ನು ಪ್ರವೇಶಿಸಿತು.

ಅವರ ಪೈಕಿ ಹೆಚ್ಚಿನವರು ಗಾಯಗೊಂಡಿದ್ದರು. ವೃದ್ಧರನ್ನು ತಾತ್ಕಾಲಿಕ ಸ್ಟ್ರೆಚರ್‌ಗಳಲ್ಲಿ ಹೊತ್ತು ತರುತ್ತಿದ್ದರು ಹಾಗೂ ಮಹಿಳೆಯರು ಕೊಡಗಳು, ಅಕ್ಕಿ ಗೋಣಿಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ತಲೆಯಲ್ಲಿ ಹೊತ್ತುಕೊಂಡಿದ್ದರು.

‘‘ಕಳೆದ ತಿಂಗಳು ನಾವು ಮನೆಯಿಂದ ಹೊರಗೆ ಕಾಲಿಡುವಂತಿರಲಿಲ್ಲ. ಯಾಕೆಂದರೆ, ಸೈನಿಕರು ಜನರನ್ನು ದೋಚುತ್ತಿದ್ದರು. ಅವರು ಗ್ರಾಮಗಳಲ್ಲಿ ಗುಂಡು ಹಾರಿಸುತ್ತಿದ್ದರು. ಹಾಗಾಗಿ, ನಾವು ತಪ್ಪಿಸಿಕೊಂಡು ಇನ್ನೊಂದು ಹಳ್ಳಿಗೆ ಪರಾರಿಯಾದೆವು’’ ಎಂದು ನಿರಾಶ್ರಿತರೊಬ್ಬರು ಹೇಳಿದರು.

‘‘ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ, ನಾವು ಬಾಂಗ್ಲಾದೇಶದತ್ತ ಹೋಗಲು ಆರಂಭಿಸಿದೆವು. ನಾವು ಅಲ್ಲಿಂದ ಹೊರಡುವ ಮೊದಲು, ನನ್ನ ಮನೆಯನ್ನು ನೋಡಲು ನನ್ನ ಗ್ರಾಮದ ಸಮೀಪಕ್ಕೆ ಹೋದೆ. ಆದರೆ, ಇಡೀ ಗ್ರಾಮವನ್ನು ಸುಟ್ಟು ಹಾಕಲಾಗಿತ್ತು’’ ಎಂದು ಅವರು ನುಡಿದರು.

ಸೋಮವಾರ ಸುಮಾರು 10,000 ನಿರಾಶ್ರಿತರು ಹೊಸದಾಗಿ ಬಾಂಗ್ಲಾದೇಶಕ್ಕೆ ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ, ಆಗಸ್ಟ್ 25ರ ಬಳಿಕ ಮ್ಯಾನ್ಮಾರ್‌ನಿಂದ 5.37 ಲಕ್ಷ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸೋಮವಾರದ ಸಂಖ್ಯೆ ಇದಕ್ಕೆ ಹೆಚ್ಚುವರಿಯಾಗಿದೆ.

ದೋಣಿ ಮುಳುಗಿ 10 ನಿರಾಶ್ರಿತರು ಮೃತ್ಯು

ಶಾ ಪೊರಿರ್ ದ್ವೀಪ್ (ಬಾಂಗ್ಲಾದೇಶ), ಅ. 16: ಮ್ಯಾನ್ಮಾರ್‌ನಿಂದ ತಪ್ಪಿಸಿಕೊಂಡು ಬಾಂಗ್ಲಾದೇಶಕ್ಕೆ ಪರಾರಿಯಾಗುತ್ತಿರುವ ರೊಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸೋಮವಾರ ನಾಫ್ ನದಿಯಲ್ಲಿ ಮಗುಚಿದಾಗ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.

ದೋಣಿಯು ತನ್ನ ಸಾಮರ್ಥ್ಯ ಮೀರಿ ಸುಮಾರು 50 ಮಂದಿಯನ್ನು ಸಾಗಿಸುತ್ತಿತ್ತು ಎಂದು ಬಾಂಗ್ಲಾದೇಶದ ಸೇನಾಧಿಕಾರಿಯೊಬ್ಬರು ಹೇಳಿದರು.

ಕಳೆದ ಆರು ವಾರಗಳಲ್ಲಿ ನಾಫ್ ನದಿಯ ಮೂಲಕ ಅಪಾಯಕಾರಿ ಪ್ರಯಾಣ ಕೈಗೊಂಡ ಸುಮಾರು 200 ರೊಹಿಂಗ್ಯಾ ಮುಸ್ಲಿಮರು ಜಲಸಮಾಧಿಯಾಗಿದ್ದಾರೆ.

ಹೆತ್ತವರನ್ನು ಕಳೆದುಕೊಂಡ 14,000 ಮಕ್ಕಳು ಶಿಬಿರಗಳಲ್ಲಿ

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಅ. 16: ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ಬೌದ್ಧ ಗುಂಪುಗಳ ಹಿಂಸಾಚಾರಕ್ಕೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಐದು ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರ ಪೈಕಿ ಓರ್ವ ಅಥವಾ ಇಬ್ಬರೂ ಹೆತ್ತವರನ್ನು ಕಳೆದುಕೊಂಡಿರುವ ಸುಮಾರು 14,000 ಮಕ್ಕಳಿದ್ದಾರೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದರು.

ನಿರಾಶ್ರಿತರಿಂದ ತುಂಬಿ ಹೋಗಿರುವ ಶಿಬಿರಗಳಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ, ಓರ್ವ ಅಥವಾ ಇಬ್ಬರೂ ಹೆತ್ತವರನ್ನು ಕಳೆದುಕೊಂಡಿರುವ 13,751 ಮಕ್ಕಳು ಪತ್ತೆಯಾಗಿದ್ದಾರೆ ಎಂದು ಬಾಂಗ್ಲಾದೇಶ ಸಾಮಾಜಿಕ ಸೇವೆಗಳ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News