ಅಜೇಯ ಫ್ರಾನ್ಸ್ ತಂಡಕ್ಕೆ ಸ್ಪೇನ್ ಎದುರಾಳಿ

Update: 2017-10-16 18:12 GMT

  ಗುವಾಹತಿ, ಅ.16: ಗ್ರೂಪ್ ಹಂತದಲ್ಲಿ ಸತತ ಮೂರು ಪಂದ್ಯಗಳನ್ನು ಜಯಿಸಿದ್ದ ಮಾಜಿ ಚಾಂಪಿಯನ್ ಫ್ರಾನ್ಸ್ ತಂಡ ಮಂಗಳವಾರ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನ ಅಂತಿಮ-16ರ ಸುತ್ತಿನಲ್ಲಿ ಯುರೋಪ್‌ನ ಮತ್ತೊಂದು ತಂಡ ಸ್ಪೇನ್‌ನ್ನು ಮುಖಾಮುಖಿಯಾಗಲಿದೆ. 2001ರ ಚಾಂಪಿಯನ್ ಫ್ರಾನ್ಸ್ ತನ್ನ ಮೊದಲ ಪಂದ್ಯದಲ್ಲಿ ನ್ಯೂ ಕ್ಯಾಲೆಡೋನಿಯಾ ತಂಡವನ್ನು 7-1 ರಿಂದ ಮಣಿಸಿತ್ತು. 2ನೆ ಪಂದ್ಯದಲ್ಲಿ ಜಪಾನ್ ವಿರುದ್ಧ್ದ 2-1 ರಿಂದ ಜಯ ಸಾಧಿಸಿತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಹೊಂಡುರಾಸ್‌ನ್ನು 5-1 ರಿಂದ ಸೋಲಿಸಿತ್ತು. ಫ್ರಾನ್ಸ್ ಗ್ರೂಪ್ ಹಂತದಲ್ಲಿ ಗರಿಷ್ಠ ಗೋಲುಗಳನ್ನು(14) ದಾಖಲಿಸಿದ ಸಾಧನೆ ಮಾಡಿದೆ. ಸ್ಟಾರ್ ಸ್ಟ್ರೈಕರ್ ಅಮೈನ್ ಗೌರಿ ಒಟ್ಟು 5 ಗೋಲುಗಳನ್ನು ಬಾರಿಸಿ ಫ್ರಾನ್ಸ್ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವಾಗಿ ಟೂರ್ನಮೆಂಟ್ ಪ್ರವೇಶಿಸಿದ್ದ ಸ್ಪೇನ್ ಚೊಚ್ಚಲ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ, ಗ್ರೂಪ್ ಹಂತದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಸ್ಪೇನ್ ತನ್ನ ಮೊದಲ ಪಂದ್ಯದಲ್ಲಿ ಬ್ರೆಝಿಲ್‌ನ ವಿರುದ್ಧ 1-2 ರಿಂದ ಸೋತಿತ್ತು. ಆ ಬಳಿಕ ನೈಜರ್(4-0) ಹಾಗೂ ನಾರ್ತ್ ಕೊರಿಯಾ(2-0) ತಂಡವನ್ನು ಸೋಲಿಸಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದೆ.

ಜಪಾನ್‌ಗೆ ಇಂಗ್ಲೆಂಡ್ ಸವಾಲು

ಕೋಲ್ಕತಾ, ಅ.16: ಪ್ರಶಸ್ತಿ ಸ್ಪರ್ಧೆಯಲ್ಲಿರುವ ಇಂಗ್ಲೆಂಡ್ ತಂಡ ಭರ್ಜರಿ ಫಾರ್ಮ್‌ನ್ನು ಮುಂದುವರಿಸಿ ನಾಕೌಟ್ ಹಂತ ತಲುಪಿದ್ದು, ಮಂಗಳವಾರ ನಡೆಯಲಿರುವ ವಿಶ್ವಕಪ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

3 ಪಂದ್ಯಗಳಲ್ಲಿ 11 ಗೋಲುಗಳನ್ನು ಬಾರಿಸಿ ಟೂರ್ನಿಯಲ್ಲಿ ಫ್ರಾನ್ಸ್(14 ಗೋಲು) ಬಳಿಕ ಗರಿಷ್ಠ ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿರುವ ಇಂಗ್ಲೆಂಡ್ ತಂಡ ಮೂರನೆ ಬಾರಿ ಕ್ವಾರ್ಟರ್‌ಫೈನಲ್‌ನತ್ತ ಚಿತ್ತವಿರಿಸಿದೆ. 2011ರ ಬಳಿಕ ಮೊದಲ ಬಾರಿ ಈ ಸಾಧನೆ ಮಾಡುವ ವಿಶ್ವಾಸದಲ್ಲಿದೆ.

ಇಂಗ್ಲೆಂಡ್ ತಂಡ ಕೊರಿಯಾದಲ್ಲಿ ಅಂಡರ್-20 ವಿಶ್ವಕಪ್‌ನ್ನು ಜಯಿಸಿತ್ತು. ಪೊಲೆಂಡ್‌ನಲ್ಲಿ ಯುರೋ ಅಂಡರ್-21 ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿತ್ತು. ಯುಇಎಫ್‌ಎ ಯುರೋಪಿಯನ್ ಅಂಡರ್-19 ಚಾಂಪಿಯನ್‌ಶಿಪ್‌ನಲ್ಲಿ ಎರಡನೆ ಸ್ಥಾನ ಪಡೆಯುವುದರೊಂದಿಗೆ ಅಂಡರ್-17 ವಿಶ್ವಕಪ್‌ಗೆ ಸ್ಥಾನ ಗಿಟ್ಟಿಸಿಕೊಂಡಿತ್ತು.

ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ನಾಕೌಟ್ ಹಂತಕ್ಕೇರಲು ವಿಫಲವಾ ಗಿದ್ದು, 3 ಪಂದ್ಯಗಳಲ್ಲಿ ಕೇವಲ 1 ಗೋಲು ಬಾರಿಸಿತ್ತು. ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಟೀವ್ ಕೂಪರ್ ಮಾರ್ಗದರ್ಶನದಲ್ಲಿ ತಂಡ ಬಲಿಷ್ಠವಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಹೊಂಡುರಾಸ್‌ನ್ನು 6-1 ರಿಂದ ಮಣಿಸಿದ್ದ ಜಪಾನ್ ಕಳೆದ ಎರಡು ಲೀಗ್ ಪಂದ್ಯಗಳಲ್ಲಿ ಜಯ ಸಾಧಿಸಲು ವಿಫಲವಾಗಿತ್ತು. ನ್ಯೂ ಕ್ಯಾಲೆಡೋನಿಯಾ ವಿರುದ್ಧ 1-1 ರಿಂದ ಡ್ರಾ ಸಾಧಿಸಿದ್ದ ಜಪಾನ್ ತಂಡ ಫ್ರಾನ್ಸ್ ವಿರುದ್ದ 1-2 ರಿಂದ ಸೋತಿತ್ತು. ಜಪಾನ್ 2011ರ ಬಳಿಕ ಮೂರನೆ ಬಾರಿ ಅಂತಿಮ-8ರ ಸುತ್ತಿಗೆ ತೇರ್ಗಡೆಯಾಗುವತ್ತ ಚಿತ್ತವಿರಿಸಿದೆ.

                                                      ಮೆಕ್ಸಿಕೊ ಚಾಲೆಂಜ್‌ಗೆ ಇರಾನ್ ಸಜ್ಜು

 ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಇರಾನ್ ತಂಡ ಮಂಗಳವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.

ಇರಾನ್ ತಂಡ ‘ಸಿ’ ಗುಂಪಿನಲ್ಲಿ ಗಿನಿಯಾ(3-1), ಜರ್ಮನಿ(4-0) ಹಾಗೂ ಕೋಸ್ಟರಿಕಾ(3-0) ತಂಡವನ್ನು ಮಣಿಸಿತ್ತು. ಇದೀಗ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿ ತನ್ನ 4ನೆ ಪ್ರಯತ್ನದಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ಗೇರುವ ಗುರಿ ಹಾಕಿಕೊಂಡಿದೆ.

 ಇರಾನ್ ತಂಡ ನಾಯಕ ಮುಹಮ್ಮದ್ ಅನುಪಸ್ಥಿತಿಯಲ್ಲಿ ಆಡಲಿದೆ. ಮುಹಮ್ಮದ್ ಕೋಸ್ಟರಿಕಾ ವಿರುದ್ಧದ ಎರಡನೆ ಪಂದ್ಯದಲ್ಲಿ 2ನೆ ಬಾರಿ ಹಳದಿ ಕಾರ್ಡ್ ಪಡೆದ ಕಾರಣ ಒಂದು ಪಂದ್ಯದಿಂದ ಅಮಾನತುಗೊಂಡಿದ್ದರು. 2 ಬಾರಿಯ ಚಾಂಪಿಯನ್ ಮೆಕ್ಸಿಕೊ ಈತನಕ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ‘ಎಫ್’ ಗುಂಪಿನಲ್ಲಿ ಮೂರನೆ ಶ್ರೇಷ್ಠ ತಂಡವಾಗಿದ್ದ ಮೆಕ್ಸಿಕೊ ಅಂತಿಮ-16ರ ಸುತ್ತು ತಲುಪಿತ್ತು. ಇರಾಕ್ (1-1) ಹಾಗೂ ಚಿಲಿ(0-0)ವಿರುದ್ಧ ಡ್ರಾ ಸಾಧಿಸಿದ್ದ ಮೆಕ್ಸಿಕೊ ತಂಡ ಇಂಗ್ಲೆಂಡ್‌ನ ವಿರುದ್ಧ 2-3 ರಿಂದ ಸೋತಿತ್ತು. ಕೇವಲ 2 ಅಂಕ ಗಳಿಸಿ ನಾಕೌಟ್ ಸುತ್ತಿಗೇರಿದೆ.

                                                           ಮಾಲಿ ವಿರುದ್ಧ ಇರಾಕ್‌ಗೆ ಕಠಿಣ ಪರೀಕ್ಷೆ

2015ರ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದಿರುವ ಮಾಲಿ ತಂಡ ಮಂಗಳವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇರಾಕ್‌ನ್ನು ಎದುರಿಸಲಿದೆ.

  ಎರಡು ಬಾರಿ ಚಾಂಪಿಯನ್ ಆಗಿರುವ ಮಾಲಿ ತಂಡ ಕೂಟದಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡಿದೆ. ಪರಾಗ್ವೆ ವಿರುದ್ಧ 2-3 ಅಂತರದಿಂದ ಸೋತಿದ್ದ ಮಾಲಿ ತಂಡ ಟರ್ಕಿ(3-0) ಹಾಗೂ ನ್ಯೂಝಿಲೆಂಡ್(3-1) ವಿರುದ್ಧ ಜಯ ಸಾಧಿಸಿ ಒಟ್ಟು 6 ಅಂಕ ಗಳಿಸಿ ‘ಬಿ’ ಗುಂಪಿನಲ್ಲಿ ಎರಡನೆ ಸ್ಥಾನ ಪಡೆದಿತ್ತು. ಇರಾಕ್ ತಂಡ ಎಫ್ ಗುಂಪಿನಲ್ಲಿ 2ನೆ ಸ್ಥಾನ ಪಡೆದಿತ್ತು. ಮೆಕ್ಸಿಕೊ ವಿರುದ್ಧ 1-1 ರಿಂದ ಡ್ರಾ ಸಾಧಿಸಿದ್ದ ಇರಾಕ್ ತಂಡ ಚಿಲಿ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿತ್ತು. ಆದರೆ, ಇಂಗ್ಲೆಂಡ್‌ನ ವಿರುದ್ಧ 0-4 ರಿಂದ ಸೋಲುವ ಮೂಲಕ ‘ಬಿ’ ಗುಂಪಿನಲ್ಲಿ ಒಟ್ಟು 4 ಅಂಕ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News