ನಾಳೆಯಿಂದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ

Update: 2017-10-16 18:22 GMT

ಒಡೆನ್ಸಾ, ಅ.16: ಜಪಾನ್ ಓಪನ್‌ನಲ್ಲಿ ಬೇಗನೆ ನಿರ್ಗಮಿಸಿದ್ದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಮಂಗಳವಾರ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ರಿಯೋ ಒಲಿಂಪಿಕ್ಸ್ ಮತ್ತು ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಈ ವರ್ಷ ಇಂಡಿಯಾ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ಜಪಾನ್ ಓಪನ್‌ನ ಎರಡನೆ ಸುತ್ತಿನಲ್ಲಿ ಸಿಂಧು ಅವರು ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ ಸೋತು ನಿರ್ಗಮಿಸಿದ್ದರು.

ಎರಡನೆ ಶ್ರೇಯಾಂಕದ ಸಿಂಧು ಮೂರು ವಾರಗಳ ತರಬೇತಿಯ ಬಳಿಕ ವಿಶ್ವದ ನಂ.10 ಚೀನಾದ ಚೆನ್ ಯುಫೈ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ 16 ತಿಂಗಳ ಬಳಿಕ ಸೂಪರ್ ಸಿರೀಸ್‌ನಲ್ಲಿ ಮೊದಲ ಗೆಲುವಿನತ್ತ ನೋಡುತ್ತಿದ್ದಾರೆ. 2016ರ ಜೂನ್‌ನಲ್ಲಿ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಜಯ ಗಳಿಸಿದ್ದರು. ಬಳಿಕ ಅವರಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ವಿಶ್ವದ ನಂ.12 ಆಟಗಾರ್ತಿ ಸೈನಾ ನೆಹ್ವಾಲ್ ವರ್ಲ್ಡ್‌ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪಡೆದವರು. ಅವರು ಜಪಾನ್ ಓಪನ್‌ನಲ್ಲಿ ಕರೋಲಿನಾ ಮರಿನ್‌ಗೆ ಎರಡನೆ ಸುತ್ತಿನಲ್ಲಿ ಶರಣಾಗಿದ್ದರು. ಇದೀಗ ಮತ್ತೆ ಸೈನಾಗೆ ಮರಿನ್ ಸವಾಲು ಎದುರಾಗಿದೆ.

  

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ.ಅವರು ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ ಎರಡು ಪ್ರಶಸ್ತಿ ಬಾಚಿಕೊಂಡಿದ್ದರು. ವಿಶ್ವದ ನಂ.8 ಆಟಗಾರ ಶ್ರೀಕಾಂತ್ ಅವರು ಗ್ಲಾಸ್ಗೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಮತ್ತು ಜಪಾನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದರು. ಬಿ.ಸಾಯಿ ಪ್ರಣೀತ್ ಅವರು ಶ್ರೀಕಾಂತ್‌ರನ್ನು ಮಣಿಸಿ ಮೊದಲ ಬಾರಿ ಸಿಂಗಾಪುರ ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಎಚ್.ಎಸ್.ಪ್ರಣಯ್ ಅವರು ಯುಎಸ್ ಓಪನ್ ಗ್ರಾನ್ ಪ್ರಿ ಗೋಲ್ಡ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಪ್ರಣಯ್‌ಗೆ ಡೆನ್ಮಾರ್ಕ್‌ನ ಎಮಿಲ್ ಹಾಲ್ಟ್ಸ್‌ಮತ್ತು ಬಿ.ಸಾಯಿ ಪ್ರಣೀತ್ ಹ್ಯಾನ್ಸ್ -ಕ್ರಿಸ್ಟಿನ್‌ರನ್ನು ಎದುರಿಸಲಿದ್ದಾರೆ.

ಸಮೀರ್ ವರ್ಮ ಅವರಿಗೆ ಕ್ವಾಲಿಫೈಯರ್‌ನಲ್ಲಿ ಜಯಿಸಿದ ಆಟಗಾರನ ಸವಾಲು ಎದುರಾಗಿದೆ. ಎರಡನೆ ಸುತ್ತಿನಲ್ಲಿ ಅಕ್ಸಲ್‌ಸನ್ ಸವಾಲು ಎದುರಾಗಲಿದೆ. ಭಾರತದ ಡಬಲ್ಸ್ ಆಟಗಾರರಾದ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ , ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕಣದಲ್ಲಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ , ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.

 ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್ ಓಪನ್ ಚಾಂಪಿಯನ್ ಪಿ.ಕಶ್ಯಪ್ ಅವರು ಡೆನ್ಮಾರ್ಕ್ ನ ವಿಕ್ಟರ್ ಸೆವೆಂಡ್‌ಸೆನ್‌ರನ್ನು ಮತ್ತು ಸುಭಾಂಕರ್ ಡೇ ಅವರು ಕಿಮ್ ಬ್ರುಯುನ್‌ರನ್ನು ಎದುರಿಸಲಿದ್ದಾರೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಅನುರಾ ಪ್ರಬೋದ್‌ಸಾಯಿ ಅವರು ಡೆನ್ಮಾರ್ಕ್‌ನ ಐರಿನಾ ಆ್ಯಮಲಿ ಆ್ಯಂಡರ್ಸನ್‌ರನ್ನು ಎದುರಿಸುವರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಐರ್ಲೆಂಡ್‌ನ ಸ್ಯಾಮ್ ಮ್ಯಾಗಿ ಮತ್ತು ಚ್ಲೋಯಿ ಮ್ಯಾಗಿರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News