×
Ad

ಬೊಬ್ಬೆ ಹೊಡೆಯುವ ಬಸ್ ಕಂಡಕ್ಟರ್‌ಗೆ ಬೀಳಲಿದೆ ದಂಡ

Update: 2017-10-17 17:21 IST

ಹೊಸದಿಲ್ಲಿ, ಅ.17: ದಿಲ್ಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆಯ ಜೊತೆಗೆ ಶಬ್ದ ಮಾಲಿನ್ಯ ಸಮಸ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಹಾರ್ನ್ ಮಾಡುವ ಡ್ರೈವರ್‌ಗಳಿಗೆ ಹಾಗೂ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಂದರ್ಭ ಜೋರಾಗಿ ಬೊಬ್ಬೆ ಹೊಡೆಯುವ ಕಂಡಕ್ಟರ್‌ಗಳಿಗೆ ದಂಡ ವಿಧಿಸಲಾಗುವುದು ಎಂದು ದಿಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಪೊರೇಶನ್ ಲಿ.(ಡಿಟಿಐಡಿಸಿಎಲ್) ತಿಳಿಸಿದೆ.

 ನಿಯಮ ಉಲ್ಲಂಘಿಸುವ ಕಂಡಕ್ಟರ್‌ಗೆ 100 ರೂ. ದಂಡ ಹಾಗೂ ಡ್ರೈವರ್‌ಗೆ 500 ರೂ. ದಂಡ ವಿಧಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಬಸ್ಸಿನ ಸಿಬ್ಬಂದಿಗಳು ಬೊಬ್ಬೆ ಹೊಡೆಯುವ ಕಾರಣ ಬಸ್ಸು ನಿಲ್ದಾಣಗಳಲ್ಲಿ ಶಬ್ದಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು ಇದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಡಿಟಿಐಡಿಸಿಎಲ್ ಆಡಳಿತ ನಿರ್ದೇಶಕ ಕೆ.ಕೆ.ದಹಿಯಾ ತಿಳಿಸಿದ್ದಾರೆ. ಬಸ್ಸು ನಿಲ್ದಾಣದಿಂದ ಬಸ್ಸು ಹೊರಡುವ ಸಂದರ್ಭ ಈ ದಂಡದ ಮೊತ್ತವನ್ನು ವಸೂಲು ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

  ದಿಲ್ಲಿಯಲ್ಲಿರುವ ಮೂರು ಪ್ರಮುಖ ಬಸ್ ನಿಲ್ದಾಣಗಳಾದ ಕಾಶ್ಮೀರಿ ಗೇಟ್, ಆನಂದ್ ವಿಹಾರ್ ಮತ್ತು ಸರಾಯ್ ಕಾಲೆಖಾನ್ ನಿಲ್ದಾಣಗಳಿಂದ ದಿನಂಪ್ರತಿ ಸುಮಾರು 2937 ಅಂತರ್‌ರಾಜ್ಯ ಸಂಚಾರಿ ಬಸ್ಸುಗಳು ಹಾಗೂ 2069 ಸ್ಥಳೀಯ ಸಂಚಾರದ ಬಸ್ಸುಗಳು ಸಂಚರಿಸುತ್ತಿದ್ದು ಸುಮಾರು 2.7 ಲಕ್ಷ ಜನ ಪ್ರತೀ ದಿನ ಈ ನಿಲ್ದಾಣಗಳಿಂದ ಸಂಚರಿಸುತ್ತಾರೆ. ಅತ್ಯಧಿಕ ಸಂಚಾರ ದಟ್ಟಣೆಯ ಸಂದರ್ಭ ಈ ಬಸ್ಸು ನಿಲ್ದಾಣಗಳಲ್ಲಿ ಶಬ್ದಮಾಲಿನ್ಯದ ಪ್ರಮಾಣ 60ರಿಂದ 82 ಡೆಸಿಬಲ್‌ಗೆ ತಲುಪುತ್ತದೆ(ಸಾಮಾನ್ಯ ಶಬ್ದಮಾಲಿನ್ಯದ ಪ್ರಮಾಣ 40ರಿಂದ 50 ಡೆಸಿಬಲ್).

ವಾಯುಮಾಲಿನ್ಯದ ಕಾರಣ ನೀಡಿ ದಿಲ್ಲಿ- ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ದೀಪಾವಳಿ ಸಂದರ್ಭ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಈ ತಿಂಗಳ ಆರಂಭದಲ್ಲಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News