ಕಣ್ಣೂರಿನಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳ ತನಿಖೆಗೆ ಸಿದ್ಧ: ಸಿಬಿಐ
ತಿರುವನಂತಪುರಂ, ಅ.17: ಕಳೆದ ಒಂದು ವರ್ಷದಿಂದ ಕಣ್ಣೂರಿನಲ್ಲಿ ನಡೆದ ರಾಜಕೀಯ ಹತ್ಯೆಯ ಪ್ರಕರಣಗಳ ತನಿಖೆಯನ್ನು ನಿರ್ವಹಿಸಲು ತಾನು ಸಿದ್ಧ ಎಂದು ಸಿಬಿಐ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.
2016ರ ಅಕ್ಟೋಬರ್‌ನಿಂದ 2017ರ ಜುಲೈವರೆಗಿನ ಅವಧಿಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ 7 ಕೊಲೆಗಳು ನಡೆದಿದ್ದು ಬಿಜೆಪಿ/ಆರೆಸ್ಸೆಸ್ ಕಾರ್ಯಕರ್ತರನ್ನು ಸಿಪಿಐ(ಎಂ) ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ. ಈ ಹತ್ಯೆಯ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಕಣ್ಣೂರು ಮೂಲದ ಟ್ರಸ್ಟ್ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ಸಿಬಿಐ ಈ ಹೇಳಿಕೆ ನೀಡಿದೆ.
ಒಂದೇ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, ಅಕ್ಟೋಬರ್ 25ರ ಒಳಗೆ ಎಲ್ಲಾ 7 ಕೊಲೆ ಪ್ರಕರಣಗಳ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿತು. ಈ ಸಂದರ್ಭ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಸಿ.ಪಿ.ಸುಧಾಕರ ಪ್ರಸಾದ್, ಕೌಟುಂಬಿಕ ವಿವಾದಗಳೂ ಬಳಿಕ ರಾಜಕೀಯ ಹತ್ಯೆಯಾಗಿ ಮಾರ್ಪಡುತ್ತದೆ ಎಂದು ತಿಳಿಸಿದರು.
ಕಣ್ಣೂರು ಜಿಲ್ಲೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆಯಾಗಿದ್ದು ಸಿಪಿಐ(ಎಂ) ಪಕ್ಷದ ಭದ್ರಕೋಟೆ ಎನಿಸಿಕೊಂಡಿದೆ.