ರಣಜಿ: ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ

Update: 2017-10-17 18:12 GMT

ಮೈಸೂರು , ಅ.17: ಕರ್ನಾಟಕ ತಂಡ ಇಲ್ಲಿ ನಡೆದ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಇನಿಂಗ್ಸ್ ಮತ್ತು 122 ರನ್‌ಗಳ ಭರ್ಜರಿ ಜಯ ಗಳಿಸುವ ಮೂಲಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದೆ.

ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆ.ಗೌತಮ್ ಚೊಚ್ಚಲ ಶತಕ ಮತ್ತು ಒಟ್ಟು 7 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

  ಸೋಮವಾರ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟದಲ್ಲಿ 169 ರನ್ ಗಳಿಸಿದ್ದ ಅಸ್ಸಾಂ ತಂಡ ಇಂದು ಆಟ ಮುಂದುವರಿಸಿ 73.1 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟಾಗಿದೆ. ನಾಯಕ ಗೋಕುಲ್ ಶರ್ಮಾ ಹೋರಾಟ ನಡೆಸಿ 66 ರನ್ ಸೇರಿಸಿದ್ದರೂ ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.ಅವರು ಮೊದಲ ಇನಿಂಗ್ಸ್‌ನಲ್ಲೂ 55 ರನ್ ಗಳಿಸಿದ್ದರು.

ವಿನಯ್ ಕುಮಾರ್ 31ಕ್ಕೆ 4 ವಿಕೆಟ್ ಮತ್ತು ಕೆ.ಗೌತಮ್ 39ಕ್ಕೆ 3 ವಿಕೆಟ್ ಉಡಾಯಿಸಿ ಅಸ್ಸಾಂ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದರು.

 ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೆ.ಗೌತಮ್ (149) ಮತ್ತು ಆರ್.ಸಮರ್ಥ್ (123) ಶತಕ, ಶ್ರೇಯಸ್ ಗೋಪಾಲ್(ಔಟಾಗದೆ 50) ಅರ್ಧಶತಕದ ನೆರವಿನಲ್ಲಿ 7 ವಿಕೆಟ್ ನಷ್ಟದಲ್ಲಿ 469 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ್ದ ಅಸ್ಸಾಂ ಮೊದಲ ಇನಿಂಗ್ಸ್‌ನಲ್ಲಿ ಕೆ.ಗೌತಮ್(20ಕ್ಕೆ 4) ಮತ್ತು ಶ್ರೇಯಸ್ ಗೋಪಾಲ್(43ಕ್ಕೆ 3) ದಾಳಿಗೆ ತತ್ತರಿಸಿ 145 ರನ್‌ಗಳಿಗೆ ಆಲೌಟಾಗಿತ್ತು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ ಮೊದಲ ಇನಿಂಗ್ಸ್ 469/7 ಡಿಕ್ಲೇರ್

►ಅಸ್ಸಾಂ ಮೊದಲ ಇನಿಂಗ್ಸ್ 145, ಅಸ್ಸಾಂ ಎರಡನೆ ಇನಿಂಗ್ಸ್ 203( ಗೋಕುಲ್ ಶರ್ಮ 66; ವಿನಯ್ ಕುಮಾರ್ 31ಕ್ಕೆ 4, ಕೆ.ಗೌತಮ್ 39ಕ್ಕೆ 3).

ದಿಲ್ಲಿಗೆ ಜಯ

ವೇಗಿ ಇಶಾಂತ್ ಶರ್ಮ ನೇತೃತ್ವದ ದಿಲ್ಲಿ ತಂಡ ರಣಜಿ ಟ್ರೋಫಿ ‘ಎ’ ಗ್ರೂಪ್ ಲೀಗ್ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಇನಿಂಗ್ಸ್ ಮತ್ತು 105 ರನ್‌ಗಳ ಜಯ ಸಾಧಿಸಿದೆ.

ಇದರೊಂದಿಗೆ ದಿಲ್ಲಿ ತಂಡ ಎರಡು ಬೋನಸ್ ಅಂಕಗಳೊಂದಿಗೆ 7 ಅಂಕಗಳಿಸಿದ್ದು, ಒಟ್ಟು 2 ಪಂದ್ಯಗಳಲ್ಲಿ 10 ಅಂಕ ಪಡೆದು ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಸೋಮವಾರ ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 157 ರನ್ ಗಳಿಸಿದ್ದ ರೈಲ್ವೆಸ್ ಇಂದು ಬ್ಯಾಟಿಂಗ್ ಮುಂದುವರಿಸಿ 206 ರನ್‌ಗಳಿಗೆ ಆಲೌಟಾಗಿದೆ.

ಸ್ಪಿನ್ನರ್‌ಗಳಾದ ಮನನ್ ಶರ್ಮಾ (17 ಓವರ್‌ಗಳಲ್ಲಿ 67ಕ್ಕೆ 3) ಮತ್ತು ವಿಕಾಸ್ ಮಿಶ್ರಾ(19.5 ಓವರ್‌ಗಳಲ್ಲಿ 37ಕ್ಕೆ 4 ವಿಕೆಟ್) ದಿಲ್ಲಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಮನನ್ ಶರ್ಮಾ ಶತಕ ಮತ್ತು ಒಟ್ಟು 7 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್ ವಿವರ

ದಿಲ್ಲಿ ಮೊದಲ ಇನಿಂಗ್ಸ್ 447, ರೈಲ್ವೆಸ್ ಮೊದಲ ಇನಿಂಗ್ಸ್ 110, ಎರಡನೆ ಇನಿಂಗ್ಸ್ 78.5 ಓವರ್‌ಗಳಲ್ಲಿ 206(ನಿತಿನ್ ಭಿಲ್ಲೆ 73, ವಿಕಾಸ್ ಮಿಶ್ರಾ 37ಕ್ಕೆ 4, ಮನನ್ ಶರ್ಮಾ 67ಕ್ಕೆ 3, ಇಶಾಂತ್ ಶರ್ಮ 34ಕ್ಕೆ 1).

ಹೈದರಾಬಾದ್-ಉ.ಪ್ರ ಪಂದ್ಯ ರದ್ದು

ಹೈದರಾಬಾದ್ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಉಭಯ ತಂಡಗಳು ತಲಾ 1 ಅಂಕವನ್ನು ಪಡೆದಿದೆ.

ಗುಜರಾತ್, ಬಂಗಾಳ, ಸೌರಾಷ್ಟ್ರಕ್ಕೆ ಜಯ

   ಗ್ರೂಪ್ ‘ಬಿ’ನಲ್ಲಿ ಕೇರಳ ವಿರುದ್ಧ ಗುಜರಾತ್ ತಂಡ 4 ವಿಕೆಟ್‌ಗಳ ಜಯ ಗಳಿಸಿದೆ. ಡಿ ಗುಂಪಿನಲ್ಲಿ ಛತ್ತೀಸ್‌ಗಡ ವಿರುದ್ಧ ಬಂಗಾಳ ತಂಡ ಇನಿಂಗ್ಸ್ ಮತ್ತು 160 ರನ್‌ಗಳ ಗೆಲುವು ಸಾಧಿಸಿದೆ.

 ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ ಸೌರಾಷ್ಟ್ರ ಇನಿಂಗ್ಸ್ ಹಾಗೂ 212 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊಹಾಲಿಯಲ್ಲಿ ಪಂಜಾಬ್‌ನ್ನು ವಿದರ್ಭ ತಂಡ ಇನಿಂಗ್ಸ್ ಹಾಗೂ 117 ರನ್‌ಗಳ ಅಂತರದಿಂದ ಸೋಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News