ಸೆಲ್ಫಿ ವಿರುದ್ಧ ಇನ್ನಾದರೂ ಜಾಗೃತಿಯಾಗಲಿ

Update: 2017-10-17 18:39 GMT

ಮಾನ್ಯರೆ,
 ಪ್ರತಿನಿತ್ಯ ಸೆಲ್ಫಿ ಎಂಬ ಹುಚ್ಚುತನಕ್ಕೆ ಸಾವಿರಾರು ಜೀವಗಳು ಬಲಿಯಾಗುತ್ತಿವೆ. ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸದಲ್ಲಿ ಇತ್ತೀಚೆಗೆ ರೈಲ್ವೆ ಹಳಿಗಳ ಮೇಲೆ ವಿದ್ಯಾರ್ಥಿಗಳು ಸತ್ತ ಸುದ್ದಿಯನ್ನು ಓದಿದಾಗ ಎಂತಹವರಿಗೂ ನೋವಾಗುತ್ತದೆ. ಇಂತಹ ಸುದ್ದಿಗಳನ್ನು ಓದಿಯೂ ಯುವಕರು ಸೆಲ್ಫಿ ಹುಚ್ಚುತನದಿಂದ ಹಿಂದೆ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಇದರ ವಿರುದ್ಧ ಒಂದು ಜನಾಂದೋಲನವನ್ನು ರೂಪಿಸಬೇಕಾಗಿದೆ.
ಕಾನೂನಿನಿಂದ ಇಂತಹ ಹುಚ್ಚುತನಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಬದಲಿಗೆ ಸರಕಾರ ಕೂಡಾ ಸಾರ್ವಜನಿಕರಲ್ಲಿ ಸೆಲ್ಫಿ ವಿಚಾರದಲ್ಲಿ ಜಾಗೃತಿಯನ್ನುಂಟುಮಾಡುವ ಸಲುವಾಗಿ ಕನಿಷ್ಠ ಕರಪತ್ರಗಳನ್ನು ಮುದ್ರಿಸಿ ಹಂಚಬೇಕು. ಮತ್ತು ಸರಕಾರದ ವತಿಯಿಂದ ಜಾಹೀರಾತುಗಳನ್ನು ನೀಡಬೇಕು. ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಹಾಗೂ ಪ್ರವಾಸೋದ್ಯಮ ಇಲಾಖೆಯವರು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಪ್ರವಾಸಿ ಕೇಂದ್ರದಲ್ಲಿ ಸೆಲ್ಫಿ ಪೋಟೋ ತೆಗೆಯುವುದರಿಂದ ಆಗುವ ಅಪಾಯಗಳು ಮತ್ತು ಈ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸುವಂತೆ ಸೂಚನಾ ಫಲಕಗಳನ್ನು ಹಾಕಿದರೆ ಸ್ವಲ್ಪ ಮಟ್ಟಿಗಾದರೂ ಈ ಹುಚ್ಚುತನಕ್ಕೆ ಕಡಿವಾಣ ನೀಡಬಹುದು. ಸತ್ತ ನಂತರ ಪರಿಹಾರ ಕೊಡುವುದು ಇದ್ದೇ ಇರುತ್ತದೆ. ಆದರೆ ಸಾಯದಂತೆ ತಡೆಹಿಡಿಯುವುದೇ ಇಲ್ಲಿ ಆಗಬೇಕಾಗಿರುವ ಕೆಲಸ.
                                                                                               
ಜೊತೆಗೆ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಲ್ಲಿ ಇಂತಹ ಹುಚ್ಚು ಸಾಹಸಗಳಿಗೆ ಕೈ ಹಾಕದಂತೆ ನಿಯಂತ್ರಿಸುವುದು ಅವಶ್ಯವಿದೆ. 

Similar News