ಕಳಪೆ ಸ್ಥಿತಿಗೆ ತಲುಪಿದೆ ರಾಜಧಾನಿಯ ವಾಯು ಗುಣಮಟ್ಟ!

Update: 2017-10-18 04:11 GMT

ಹೊಸದಿಲ್ಲಿ, ಅ. 18: ರಾಷ್ಟ್ರರಾಜಧಾನಿಯಲ್ಲಿ ಮಾಲಿನ್ಯ ಮಿತಿಮೀರಿದ್ದು, ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಚಳಿಗಾಲದಲ್ಲಿ  ಮಾಲಿನ್ಯ ಮಿತಿಮೀರುವುದನ್ನು ತಡೆಯುವ ಸಲುವಾಗಿ ಡೀಸೆಲ್ ಜನರೇಟರ್ ನಿಷೇಧ, ಭದ್ರಾಪುರ ಉಷ್ಣವಿದ್ಯುತ್ ಸ್ಥಾವರ ತಾತ್ಕಾಲಿಕ ನಿಲುಗಡೆ ಸೇರಿದಂತೆ ಹಲವು ಕ್ರಮಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ಘೋಷಿಸಿದೆ.

ವಾಯು ಗುಣಮಟ್ಟ ಕಳಪೆ ಸ್ಥಿತಿಯನ್ನು ತಡೆಯಲು ವಾಹನಗಳ ಪಾರ್ಕಿಂಗ್ ಶುಲ್ಕ ನಾಲ್ಕು ಪಟ್ಟು ಹೆಚ್ಚಳ, ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಬೀಗದಂಥ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

"ಈ ಬಾರಿ ನಗರದಲ್ಲಿ ಮಾಲಿನ್ಯ ಆ ಮಟ್ಟಕ್ಕೆ ತಲುಪುವುದಿಲ್ಲ ಎಂಬ ನಿರೀಕ್ಷೆ ಇದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ, ವಾಹನಗಳಿಂದ ಹಿಡಿದು ಶಾಲೆಗಳವರೆಗೆ ಎಲ್ಲವನ್ನೂ ಮುಚ್ಚಬೇಕಾಗುತ್ತದೆ. ಇದರಿಂದ ನಗರದ ಜನಜೀವನವೇ ಸ್ತಬ್ಧವಾಗುವ ಅಪಾಯವಿದೆ" ಎಂದು ಇಪಿಸಿಎ ಸದಸ್ಯೆ ಮತ್ತು ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ಹೇಳಿದ್ದಾರೆ.

ಶ್ರೇಣೀಕೃತ ಸ್ಪಂದನೆ ಕ್ರಿಯಾಯೋಜನೆಯ ಅಂಗವಾಗಿ ಈ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಮಂಗಳವಾರದಿಂದಲೇ ಇದು ಕಾರ್ಯರೂಪಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲ ಪ್ರದೇಶಗಳ ಮಾಲಿನ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ. ದೆಹಲಿಯ ವಾಯುಗುಣಮಟ್ಟ ಈಗಾಗಲೇ ತೀರಾ ಕಳಪೆ ಮಟ್ಟ (ಎಕ್ಯೂಐ 308) ತಲುಪಿದ್ದು, ದೀಪಾವಳಿ ಮರುದಿನ ಅಂದರೆ ಅಕ್ಟೋಬರ್ 20ರಂದು ಇದು ತೀವ್ರ ಸ್ವರೂಪದ ಮಟ್ಟ (ಎಕ್ಯೂಐ 401-500) ತಲುಪುವ ನಿರಿಕ್ಷೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News