ಸುಪ್ರೀಂ ನಿಷೇಧ ಧಿಕ್ಕರಿಸಿ ಪಟಾಕಿ ಹಂಚಿದ ಬಿಜೆಪಿ ಮುಖಂಡ

Update: 2017-10-18 04:31 GMT

ಹೊಸದಿಲ್ಲಿ, ಅ. 18: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಅ. 9ರಂದು ನೀಡಿದ ಆದೇಶವನ್ನು ಧಿಕ್ಕರಿಸಿ, ಬಿಜೆಪಿ ವಕ್ತಾರ ತೇಜೇಂದ್ರ ಬಗ್ಗಾ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಿನಗರ ಪ್ರದೇಶದಲ್ಲಿ ಮಕ್ಕಳಿಗೆ ಪಟಾಕಿ ವಿತರಿಸಿದ್ದಾರೆ.

"ಸುಪ್ರೀಂಕೋರ್ಟ್ ಪಟಾಕಿ ಮಾರಾಟ ನಿಷೇಧಿಸಿದೆ. ಆದರೆ ನಾನು ಕೇವಲ ಪಟಾಕಿ ಹಂಚಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಪಟಾಕಿಯಿಂದ ಮಾಲಿನ್ಯವಾಗು ತ್ತಿದ್ದರೆ  ಅದನ್ನು ನಿಷೇಧಿಸಬೇಕಿತ್ತು. ಆದರೆ ಪಟಾಕಿಯ ಮಾರಾಟ ಮಾತ್ರ ನಿಷೇಧಿಸುವುದು ತಪ್ಪು. ನವೆಂಬರ್ 1ರವರೆಗೆ ಮಾತ್ರ ಅದನ್ನು ನಿಷೇಧಿಸಿದರೆ ಆ ಬಳಿಕ ಮಾಲಿನ್ಯ ಪ್ರಮಾಣ ಹೆಚ್ಚುತ್ತದೆ. ಹೊಸವರ್ಷದ ಆರಂಭದ ವೇಳೆಯೂ ಪಟಾಕಿ ಸಿಡಿಸಲಾಗುತ್ತದೆ" ಎಂದು ಬಗ್ಗಾ ಟ್ವಿಟ್ಟರ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ. ಪಟಾಕಿ ಹಂಚುತ್ತಿರುವ ವಿಡಿಯೊ ಹಾಗೂ ಚಿತ್ರಗಳನ್ನು ಕೂಡಾ ಬಗ್ಗಾ ಟ್ವೀಟ್ ಮಾಡಿದ್ದಾರೆ.

ಐಐಟಿ ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗಾ, ಪಟಾಕಿಯಿಂದ ಆಗುವ ಮಾಲಿನ್ಯ ಒಟ್ಟು ಮಾಲಿನ್ಯದ ಶೇಕಡ 0.3 ಮಾತ್ರ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯಮಟ್ಟವನ್ನು ಅಳೆಯುವ ಸಲುವಾಗಿ ಪಟಾಕಿ ವಿತರಣೆ ಮಾಡುವುದಾಗಿ ಈ ಹಿಂದೆ ಬಗ್ಗಾ ಬಹಿರಂಗ ಹೇಳಿಕೆ ನೀಡಿದ್ದರು. ಈ ಸಂಬಂಧ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಿಪಾವಳಿಯನ್ನು ಗುರಿಮಾಡಿದೆ ಎನ್ನುವುದು ಅವರ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News