×
Ad

ಆಝಾನ್ ಅನ್ನು ಪಟಾಕಿ ಸದ್ದಿಗೆ ಹೋಲಿಸಿ ವಿವಾದಕ್ಕೀಡಾದ ತ್ರಿಪುರಾ ರಾಜ್ಯಪಾಲ

Update: 2017-10-18 11:35 IST

ಕೊಲ್ಕತ್ತಾ,ಅ.18: ಆಝಾನ್ ಕರೆಯನ್ನು ಪಟಾಕಿಗಳ ಸದ್ದಿಗೆ ಹೋಲಿಸಿ ಟ್ವೀಟ್ ಮಾಡುವ ಮೂಲಕ ತ್ರಿಪುರಾ ರಾಜ್ಯಪಾಲ ಹಾಗೂ ಹಿರಿಯ ಬಿಜೆಪಿ ನಾಯಕ ತಥಗತಾ ರಾಯ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ದೀಪಾವಳಿ ಆಚರಣೆ ಸಂದರ್ಭ ಉಂಟಾಗುವ ಶಬ್ದ ಮಾಲಿನ್ಯದ ಬಗ್ಗೆ ದೂರುವವರನ್ನು ಪ್ರಶ್ನಿಸಿದ ರಾಯ್, ``ಪ್ರತಿ ದೀಪಾವಳಿಯ ಸಂದರ್ಭ ಪಟಾಕಿಯ ಸದ್ದಿನಿಂದ ಉಂಟಾಗುವ ಶಬ್ದ ಮಾಲಿನ್ಯದ ವಿಚಾರವಾಗಿ  ಜಗಳಗಳಾಗುತ್ತವೆ. ಪಟಾಕಿಗಳನ್ನು ವರ್ಷದ ಕೆಲವೇ ದಿನಗಳಲ್ಲಿ  ಉಪಯೋಗಿಸಲಾಗುತ್ತದೆ.  ಆದರೆ  ಬೆಳಗ್ಗೆ 4:30ಕ್ಕೆ ಧ್ವನಿವರ್ಧಕಗಳ ಮೂಲಕ ನೀಡಲಾಗುವ ಆಝಾನ್ ಬಗ್ಗೆ ಯಾವುದೇ ಜಗಳವಿಲ್ಲ!'' ಎಂದು ಟ್ವೀಟ್ ಮಾಡಿದ್ದಾರೆ.

``ಜಾತ್ಯತೀತರ ಗುಂಪು ಆಝಾನ್‍ನಿಂದ ಉಂಟಾಗುವ ಶಬದ ಮಾಲಿನ್ಯದ ಬಗ್ಗೆ  ವಹಿಸಿರುವ ಮೌನ ನನಗೆ ವಿಚಿತ್ರವೆನಿಸುತ್ತದೆ. ಕುರ್ ಆನ್ ಅಥವಾ ಯಾವುದೇ ಹದೀಸ್ ನಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸಬೇಕೆಂದು ಬರೆದಿಲ್ಲ,'' ಎಂದೂ ರಾಯ್ ಹೇಳಿದ್ದಾರೆ.

ದೀಪಾವಳಿಯ ದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಗೆ ಪಟಾಕಿ  ಸಿಡಿಸುವುದಕ್ಕೆ ನಿರ್ಬಂಧ ವಿಧಿಸಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಹೊರಡಿಸಿರುವ ಆದೇಶಕ್ಕೆ ಪ್ರತಿಯಾಗಿ ಅವರ ಈ ಹೇಳಿಕೆ ಬಂದಿದೆ.

ದಿಲ್ಲಿಯಲ್ಲಿ ಪಟಾಕಿಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದಂದಿನಿಂದ ಹಿಂದೂಗಳ ಹಬ್ಬಗಳ ಮೇಲೆ ಇಂತಹ ನಿರ್ಬಂಧಗಳನ್ನು ವಿಧಿಸುವುದನ್ನು ರಾಯ್ ವಿರೋಧಿಸಿದ್ದರು. ``ಪಟಾಕಿಯಷ್ಟೇ ಅಲ್ಲ, ಒಂದು ದಿನ ಅವಾರ್ಡ್ ವಾಪ್ಸಿ ಸೈನ್ಯವು  ಹಿಂದೂ ಅಂತ್ಯಕ್ರಿಯೆ ಪದ್ಧತಿಯು  ಮಾಲಿನ್ಯಕ್ಕೆ ಕಾರಣವೆಂದು ಅದಕ್ಕೂ  ನಿಷೇಧ ಹೇರಬೇಕೆಂಬ ಬೇಡಿಕೆಯಿಡಬಹುದು,'' ಎಂದಿದ್ದರು.

ತಮ್ಮ ಕಟ್ಟಾ ಹಿಂದುತ್ವ ನಿಲುವುಗಳಿಗೆ ಸಾಕಷ್ಟು ಸುದ್ದಿಯಾಗಿರುವ ರಾಯ್  ಅವರು  ರೋಹಿಂಗ್ಯ ನಿರಾಶ್ರಿತರನ್ನು ``ತ್ಯಾಜ್ಯ'' ಎಂದು  ಹೇಳುವ ಮೂಲಕವೂ ವಿವಾದಕ್ಕೀಡಾಗಿದ್ದರು. ``ಬಾಂಗ್ಲಾದೇಶ ಅಥವಾ ಬೇರೆ ಯಾವುದೇ ಮುಸ್ಲಿಂ ದೇಶ ರೋಹಿಂಗ್ಯರನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ  ದೊಡ್ಡ ಧರ್ಮಶಾಲೆಯಾಗಿರುವ ಭಾರತದಲ್ಲಿ `ಇಲ್ಲ' ಎಂದು ಹೇಳಿದರೆ ನೀವು ಅಮಾನವೀಯ!'' ಎಂದು ರಾಯ್ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News