×
Ad

ಈ ದೇವಸ್ಥಾನದಲ್ಲಿ ಆಭರಣ-ನೋಟುಗಳಿಂದಲೇ ಗರ್ಭಗುಡಿಯ ಅಲಂಕಾರ

Update: 2017-10-18 12:21 IST

ರತ್ಲಂ,ಅ.18 :  ಮಧ್ಯ ಪ್ರದೇಶದ ರತ್ಲಂ ಎಂಬಲ್ಲಿರುವ ಮಹಾಲಕ್ಷ್ಮೀಜಿ ದೇವಸ್ಥಾನಕ್ಕೆ  ಭೇಟಿ ನೀಡುವ ಭಕ್ತಾದಿಗಳ ಕಣ್ಣಿಗೆ ದೇವಳದ  ಮೂರ್ತಿಗಳಿಗಿಂತ ಹೆಚ್ಚಾಗಿ ಗರ್ಭಗುಡಿಯ  ಇಂಚು ಇಂಚಿನಲ್ಲಿಯೂ ತುಂಬಿರುವ ಒಡವೆಗಳು ಹಾಗೂ ಹಣದತ್ತವೇ ದೃಷ್ಟಿ  ಹಾಯುತ್ತದೆ. ಈ ದೇವಸ್ಥಾನದಲ್ಲಿ ತುಂಬಿರುವ ಚಿನ್ನಾಭರಣ ಮತ್ತು ನಗದಿನ ಮೌಲ್ಯ ಅಂದಾಜು ರೂ. 100 ಕೋಟಿ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

ದೀಪಾವಳಿ ಸಂದರ್ಭ ಭಕ್ತಾದಿಗಳು ತಮ್ಮಲ್ಲಿರುವ ನಗದು, ಚಿನ್ನಾಭರಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೇವಳದ ಮುಖ್ಯ ಅರ್ಚಕರಿಗೆ ನೀಡುತ್ತಾರೆ. ನಂತರ ಅವುಗಳನ್ನು ಅಲ್ಲಿನ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಪ್ರತಿ ವರ್ಷ ಈ ಹಬ್ಬದ ಸಂದರ್ಭ ದೇವಳದಲ್ಲಿ ಇಂತಹ ಪದ್ಧತಿಯೊಂದು ಹಲವಾರು ವರ್ಷಗಳಿಂದ ನಡೆದು ಬಂದಿದೆ.

ದೇವಸ್ಥಾನದಲ್ಲಿ ಒಡವೆಗಳು ಹಾಗೂ ನಗದು ಇಡಲು ಜಾಗ ಇಲ್ಲದೇ ಇದ್ದರೂ ದೀಪಾವಳಿಯಾದ್ಯಂತ ಭಕ್ತಾದಿಗಳು ತಮ್ಮ  ಬೆಲೆಬಾಳುವ ವಸ್ತುಗಳನ್ನು ಸಮರ್ಪಿಸುತ್ತಲೇ ಇರುತ್ತಾರೆ. ಗ್ರಾಮದ ಭಕ್ತಾದಿಗಳ ಹೊರತಾಗಿ  ದೂರದೂರದ ಪ್ರದೇಶಗಳಿಂದಲೂ ಇಲ್ಲಿಗೆ ಜನಸಾಗರವೇ ಹರಿದು ಬರುತ್ತದೆ.

ಈ ಒಂದು ಪದ್ಧತಿಯ ಕಾರಣದಿಂದಾಗಿ ಸ್ಥಳೀಯಾಡಳಿತ ಹಾಗೂ ಪೊಲೀಸರು ದೇವಸ್ಥಾನದಲ್ಲಿ ಸಾಕಷ್ಟು ಸುರಕ್ಷಾ ವ್ಯವಸ್ಥೆ  ಕೈಗೊಂಡಿದ್ದು ದೇವಳದ ಗರ್ಭಗುಡಿಯ ಮೇಲೆ ಸದಾ  ಪೊಲೀಸ್ ಸಿಬ್ಬಂದಿಗಳು ನಿಗಾ ಇಡುತ್ತಾರೆ ಎಂದು ಎಎಸ್‍ಪಿ ಪ್ರದೀಪ್ ಸಿಂಗ್ ಹೇಳುತ್ತಾರೆ.

ಹೀಗೆ ಸಾವಿರಾರು ಭಕ್ತಾದಿಗಳು ನೀಡುವ ಧನ ಕನಕಾದಿಗಳನ್ನು ಭಾಯಿ ದೂಜ್ ಹಬ್ಬದ ನಂತರ ಅವುಗಳ ಮಾಲಕರಿಗೆ ಹಸ್ತಾಂತರಿಸಲಾಗುತ್ತದೆ.

ಪ್ರತಿಯೊಬ್ಬ ಭಕ್ತಾದಿ ನೀಡಿದ ಕಾಣಿಕೆಗಳ ವಿವರಗಳನ್ನು ಮುಖ್ಯ ಅರ್ಚಕರು ಡೈರಿಯೊಂದರಲ್ಲಿ ಬರೆದಿಟ್ಟು ನಂತರ ಅದನ್ನು ಹಿಂದಿರುಗಿಸುತ್ತಾರೆ. ಇಲ್ಲಿಯ ತನಕ ಯಾವ ಭಕ್ತಾದಿಯ ಒಡವೆಯೂ ಇಲ್ಲಿ ಕಳೆದು ಹೋಗಿದ್ದಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News