"ಜಯ್ ಶಾಗೆ ಸರಕಾರದಿಂದ ಕಾನೂನು ಸಹಾಯ-ವೈ ದಿಸ್ ಕೊಲವೆರಿ ಡಾ..?"

Update: 2017-10-18 08:02 GMT

ಹೊಸದಿಲ್ಲಿ,ಅ.18 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಬಗ್ಗೆ ಟ್ವೀಟ್ ಒಂದನ್ನು ಮಾಡಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಜಯ್ ಶಾ ಅವರ ಪರವಾಗಿ ವಕಾಲತ್ತು ಮಾಡಲು ಸರಕಾರಿ ಸೇವೆಯಲ್ಲಿರುವ ವಕೀಲರನ್ನು ಉಪಯೋಗಿಸಲಾಗುವ ಕುರಿತಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ "ಶಾ ಝಾದಾಗೆ ಸರಕಾರದ ಕಾನೂನು ಸಹಾಯ, ವೈ ದಿಸ್ ಕೊಲವೆರಿ ಡಾ?'' ಎಂದು ಟ್ವೀಟ್ ಮಾಡಿದ್ದಾರೆ.

ತಮಿಳು ನಟ ಧನುಷ್ ಅವರ '3' ಚಿತ್ರದ ಜನಪ್ರಿಯ ಹಾಡು `ಕೊಲವೆರಿ ಡಿ'ಯನ್ನು ಎರವಲು ಪಡೆದು ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಅಂರ್ತಜಾಲದಲ್ಲಿ  ಭಾರೀ ಜನಪ್ರಿಯತೆಯನ್ನು ಈ ಹಾಡು ಗಿಟ್ಟಿಸಿತ್ತು. `ಕೊಲವೆರಿ ಡಿ' ಎಂಬ ತಮಿಳು ಪದದ ಅರ್ಥ 'ಕೊಲ್ಲಬೇಕೆನ್ನುವಷ್ಟು ಕೋಪ' ಎನ್ನುವುದು.

ಜಯ್ ಶಾ ನಡೆಸಿದ್ದಾರೆನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಬೇಡಿಕೆಯಿಟ್ಟಿದ್ದನ್ನು ಬಿಜೆಪಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಹಲ್ ಹೇಳಿಕೆ ಬಂದಿದೆ. ಈಗಾಗಲೇ ಜಯ್ ಅವರು  ತಮ್ಮ ಬಗ್ಗೆ ವ್ಯತಿರಿಕ್ತ ವರದಿ ಪ್ರಕಟಿಸಿದ್ದ 'ದಿ ವೈರ್' ವೆಬ್ ತಾಣದ ವಿರುದ್ಧ ನೂರು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಯ್ ಶಾ ಪರವಾಗಿ ನ್ಯಾಯಾಲಯದಲ್ಲಿ ವಾದಿಸಬಹುದೆಂಬ ವರದಿಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್ ಸರಕಾರಿ ವಕೀಲರೊಬ್ಬರು ಹೇಗೆ ಖಾಸಗಿ ವ್ಯಕ್ತಿಯ ಪರ ವಾದಿಸಬಹುದೆಂದು ಪ್ರಶ್ನಿಸಿತ್ತು.

ಅತ್ತ ಅಮಿತ್ ಶಾ ತಮ್ಮ ಪುತ್ರನ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಸಾಕ್ಷ್ಯಗಳಿದ್ದರೆ ಸಾಬೀತು ಪಡಿಸುವಂತೆ ಹೇಳಿದ್ದರು. ಇತ್ತೀಚೆಗೆ ಗುಜರಾತ್ ಗೆ ಭೇಟಿ ನೀಡಿದ್ದ  ರಾಹುಲ್, ಅಚ್ಛೇ ದಿನ್ ಕೇವಲ ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾತ್ರ ಬಂದಿದೆ ಎಂದೂ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News