ಒಡಿಶಾದಲ್ಲಿ ಪಟಾಕಿ ದುರಂತಕ್ಕೆ 8 ಬಲಿ

Update: 2017-10-18 14:35 GMT

ಭುವನೇಶ್ವರ, ಅ.18: ಅನಧಿಕೃತ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದಾಗಿ  8 ಮಂದಿ ಮೃತಪಟ್ಟು,20ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಒಡಿಶ್ಸಾದ ಬಾಲಾಸೋರ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದೆ.

ಬಾಲ್ ಸೋರ್ ನ  ಬಹಾಬಲ್ಪುರದಲ್ಲಿ  ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಪಟಾಕಿ ಕಾರ್ಖಾನೆಯ ಮಾಲಿಕನ ಮಗ ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ ಸಾವಿಗೀಡಾದವರಲ್ಲಿ ಮಕ್ಕಳು ಸೇರಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಐದು ಮಂದಿಯ ಮೃತದೇಹವನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

ರೂರ್ಕೆಲಾದಲ್ಲಿ ಇಂದು  ಬೆಳಗ್ಗೆ ಪಟಾಕಿ ಅಂಗಡಿಯೊಂದಕ್ಕೆ ಬೆಂಕಿ ಬಿದ್ದು ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು. ಪುರಿ ಜಿಲ್ಲೆಯ ಪಿಪಿಲಿ ಎಂಬಲ್ಲಿ  ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ನಾಲ್ವರು ಕಣ್ಣನ್ನು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News