​ನ.19: ಕುಮಟಾದಲ್ಲಿ ಕಾಂಗ್ರೆಸ್ ಮೀನುಗಾರರ ಸಮಾವೇಶ

Update: 2017-10-19 11:57 GMT

ಮಂಗಳೂರು, ಅ.19: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ಸೂಚನೆಯಂತೆ ರಾಷ್ಟ್ರದಾದ್ಯಂತ ಮೀನುಗಾರರ ಕಾಂಗ್ರೆಸ್ ಘಟಕವನ್ನು ರಚಿಸಲಾಗಿದೆ. ರಾಜ್ಯದಲ್ಲೂ ಹೊಸ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಅದರ ವತಿಯಿಂದ ನ.19ರಂದು ಕುಮಟಾದಲ್ಲಿ ಕಾಂಗ್ರೆಸ್ ಮೀನುಗಾರರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಘಟಕದ ರಾಜ್ಯಾಧ್ಯಕ್ಷ ಹಾಗು ಮಾಜಿ ಶಾಸಕ ಯು.ಆರ್.ಸಭಾಪತಿ ಹೇಳಿದ್ದಾರೆ.

ಗುರುವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನ.19ರಂದು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಅದೇ ದಿನ ಕುಮಟಾದಲ್ಲಿ ಕಾಂಗ್ರೆಸ್ ಮೀನುಗಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು. ಎರಡೂ ಕಾರ್ಯಕ್ರಮದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 23 ಲಕ್ಷ ಮೀನುಗಾರರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 10 ವಿಧಾನ ಸಭಾ ಕ್ಷೇತ್ರಗಳಲ್ಲಿ ಮೀನುಗಾರರ ಸಮಾಜದ ಅಭ್ಯರ್ಥಿಗೆ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಕಲ್ಪಿಸಿಕೊಡಲು ಮನವಿ ಸಲ್ಲಿಸಲಾಗುವುದು. ಅಲ್ಲದೆ ಕೇಂದ್ರ ಸರಕಾರವು ರಾಷ್ಟ್ರೀಯ ಮೀನುಗಾರಿಕಾ ನೀತಿ ರೂಪಿಸಬೇಕು, ಮೀನುಗಾರರ ಹಿತ ಕಾಪಾಡಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಮೀನುಗಾರರ ಸಮಾಜದ 39 ವರ್ಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಈ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ಸಭಾಪತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಕಾರ್ಪೊರೇಟರ್ ನವೀನ್ ಡಿಸೋಜ, ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಇಬ್ರಾಹೀಂ ಕೋಡಿಜಾಲ್, ಸುರೇಂದ್ರ ಕಂಬಳಿ, ರಾಮ ಮೊಗೇರ ಭಟ್ಕಳ, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News