ಬಜಾಲ್- ಕಲ್ಲಗುಡ್ಡೆ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

Update: 2017-10-19 12:25 GMT

ಮಂಗಳೂರು, ಅ.19: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಕೈಗೊಳ್ಳಲಾಗುವ ನಗರದ ಬಜಾಲ್-ಕಲ್ಲಗುಡ್ಡೆ ರಸ್ತೆಯನ್ನು 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸುವ ಕಾಮಗಾರಿಗೆ ಮಂಗಳೂರು ಮೇಯರ್ ಕವಿತಾ ಸನಿಲ್ ಗುರುವಾರ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ನಗರದ ವಿವಿಧ ಕಡೆಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಈಗಾಗಲೇ ಮುಂದಡಿ ಇಡಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಲಾಗಿದೆ. ಜತೆಗೆ ನಗರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇನ್ನಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದರು.

ಮಂಗಳೂರಿನ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಎಲ್ಲಾ ಅನುದಾನಗಳನ್ನು ಜತೆಯಾಗಿಸಿ, ಜನರ ಬೇಡಿಕೆಗಳನ್ನು ಈಡೇರಿಸುವ ನೆಲೆಯಿಂದ ಒಂದೊಂದೇ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಒಂದೆರಡು ದಿನದಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಸುಸ್ಥಿತಿಗೆ ತರುವ ಕೆಲಸ ನಡೆಯಲಿದೆ ಎಂದರು.

ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮನಪಾ ಉಪಮೇಯರ್ ರಜನೀಶ್, ಮುಖ್ಯಸಚೇತಕ ಹಾಗೂ ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬಿತಾ ಮಿಸ್ಕಿತ್, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ಸುಮಯ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News