ಅಫ್ಘಾನ್ ಸೇನಾ ನೆಲೆಯ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ: ಕನಿಷ್ಠ 43 ಸೈನಿಕರ ಸಾವು

Update: 2017-10-19 14:24 GMT

ಕಾಬೂಲ್, ಅ. 19: ದಕ್ಷಿಣ ಅಫ್ಘಾನಿಸ್ತಾನದಲ್ಲಿರುವ ಸೇನಾ ನೆಲೆಯೊಂದರ ಮೇಲೆ ಗುರುವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 43 ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ. ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.

ಇದು ಭದ್ರತಾ ನೆಲೆಯೊಂದರ ಮೇಲೆ ಈ ವಾರ ನಡೆದ ಮೂರನೆ ದಾಳಿಯಾಗಿದೆ.

ಕಂದಹಾರ್ ಪ್ರಾಂತದ ಮೈವಾಂಡ್ ಜಿಲ್ಲೆಯ ಚಾಶ್ಮೊ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಕೇವಲ ಇಬ್ಬರು ಸೈನಿಕರು ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಒಂಬತ್ತು ಸೈನಿಕರು ಗಾಯಗೊಂಡಿದ್ದಾರೆ ಹಾಗೂ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದಿದೆ.

ಮುಂಜಾನೆ ನಡೆದ ದಾಳಿಯಲ್ಲಿ, ಭಯೋತ್ಪಾದಕರು ಸ್ಫೋಟಕ ತುಂಬಿದ ಕನಿಷ್ಠ ಒಂದು ಹಮ್ವೀ ವಾಹನವನ್ನು ಸ್ಫೋಟಿಸಿದ್ದಾರೆ ಹಾಗೂ ನೆಲೆಯನ್ನು ನೆಲಸಮಗೊಳಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಸೇನಾ ನೆಲೆಯ ದ್ವಾರವನ್ನು ಸ್ಫೋಟಿಸಲು ಭಯೋತ್ಪಾದಕರು ಸ್ಫೋಟಕ ತುಂಬಿದ ಹಮ್ವೀ ವಾಹನವನ್ನು ಬಳಸಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಒಂದಕ್ಕಿಂತ ಹೆಚ್ಚು ಸ್ಫೋಟಗಳು ನಡೆದಿವೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ ಎಂದರು.

‘‘ದುರದೃಷ್ಟವಶಾತ್ ಶಿಬಿರದ ಒಳಗೆ ಏನೂ ಉಳಿದಿಲ್ಲ. ಕಣ್ಣಿಗೆ ಬಿದ್ದ ಎಲ್ಲ ವಸ್ತುಗಳನ್ನು ಅವರು ಸುಟ್ಟುಹಾಕಿದ್ದಾರೆ’’ ಎಂದರು.

10 ಭಯೋತ್ಪಾದಕರೂ ಸತ್ತಿದ್ದಾರೆ ಎಂದು ವಕ್ತಾರ ಹೇಳಿದರು.

ಹೊಣೆ ಹೊತ್ತುಕೊಂಡ ತಾಲಿಬಾನ್

ಈ ನಡುವೆ, ಪತ್ರಕರ್ತರಿಗೆ ಸಂದೇಶವೊಂದನ್ನು ಕಳುಹಿಸಿದ ತಾಲಿಬಾನ್, ದಾಳಿಯನ್ನು ತಾನು ಮಾಡಿರುವುದಾಗಿ ಹೇಳಿಕೊಂಡಿದೆ ಹಾಗೂ ನೆಲೆಯಲ್ಲಿದ್ದ ಎಲ್ಲ 60 ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ ಎಂದು ಹೇಳಿದೆ.

ಇದು ಈ ವಾರ ಅಫ್ಘಾನಿಸ್ತಾನದಲ್ಲಿ ಭದ್ರತಾ ಸಂಸ್ಥಾಪನೆಯೊಂದರ ಮೇಲೆ ನಡೆಯುತ್ತಿರುವ ಮೂರನೆ ಆತ್ಮಹತ್ಯಾ ಮತ್ತು ಬಂದೂಕು ದಾಳಿಯಾಗಿದೆ. ಈ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಸೈನಿಕರು, ಪೊಲೀಸರು ಮತ್ತು ನಾಗರಿಕರು ಸೇರಿದಂತೆ 120ನ್ನು ಮೀರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News