ಈ ರಾಜ್ಯದಲ್ಲಿ ಚಿತ್ರೀಕರಣ ನಡೆಸಿದರೆ ಚಿತ್ರತಂಡಕ್ಕೆ ಸಿಗಲಿದೆ 1 ಕೋ.ರೂ. ಪ್ರೋತ್ಸಾಹಧನ!

Update: 2017-10-19 16:12 GMT

ಹೊಸದಿಲ್ಲಿ, ಅ.19: ಸಾಮಾನ್ಯವಾಗಿ ರಾಜ್ಯದ, ದೇಶದ ಹೊರಗೆ ಚಿತ್ರೀಕರಣ ನಡೆಸುವುದೆಂದರೆ ಚಲನಚಿತ್ರ ನಿರ್ಮಾಪಕರಿಗೆ ತಲೆಬಿಸಿಯೇ ಸರಿ. ಬೇರೆ ಪ್ರದೇಶಗಳಿಗೆ ಇಡೀ ಚಿತ್ರತಂಡವನ್ನು ಕರೆದೊಯ್ಯುವುದು, ಅಲ್ಲಿನ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ನಿರ್ಮಾಪಕರಿಗೆ ಸಮಸ್ಯೆ ಎಂದರೆ ತಪ್ಪಾಗಲಾರದು. ಆದರೆ ಇನ್ನು ಮುಂದೆ ಅಸ್ಸಾಂನಲ್ಲಿ ಚಿತ್ರೀಕರಣ ನಡೆಸಲು ನಿರ್ಮಾಪಕರು ನಾ ಮುಂದು, ತಾ ಮುಂದು ಎಂದು ರೆಡಿಯಾಗಬಹುದು ಎಂದೆನಿಸುತ್ತಿದೆ. ಏಕೆಂದರೆ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಅಸ್ಸಾಂ ಸರಕಾರ ಹೊಸ ಘೋಷಣೆಯೊಂದನ್ನು ಮಾಡಿದೆ.

ಹಿಂದಿ, ಇಂಗ್ಲಿಷ್ ಅಥವಾ ಇತರ ಯಾವುದೇ ‘ವಿದೇಶಿ’ ಭಾಷೆಗಳ ಚಿತ್ರೀಕರಣವನ್ನು ಅಸ್ಸಾಂನಲ್ಲಿ ನಡೆಸಿದರೆ ಸರಕಾರವೇ ಚಿತ್ರತಂಡಕ್ಕೆ 1 ಕೋಟಿ ರೂ. ಪ್ರೋತ್ಸಾಹ ಧನ ನೀಡಲಿದೆಯಂತೆ. ಅಸ್ಸಾಂ ಸರಕಾರ ಗುರುವಾರ ಈ ಯೋಜನೆಯನ್ನು ಘೋಷಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಕ್ರಮ ಪ್ರಯೋಜನಕಾರಿಯಾಗಲಿದೆ ಎನ್ನಲಾಗಿದೆ.

“ಅಸ್ಸಾಂನ ವಿವಿಧ ಸುಂದರ ಪ್ರದೇಶಗಳಿಗೆ ಬಂದು ಚಿತ್ರೀಕರಣ ನಡೆಸಲು ನಿರ್ದೇಶಕರನ್ನು ಆಕರ್ಷಿಸಲು ನಾವು ಬಯಸಿದ್ದೇವೆ. ಚಿತ್ರದ 25 ಶೇ.ದಷ್ಟು ಚಿತ್ರೀಕರಣವನ್ನು ಅಸ್ಸಾಂನಲ್ಲಿ ನಡೆಸಿದರೆ ರಾಜ್ಯದಲ್ಲಿ ಖರ್ಚಾದ 25 ಶೇ.ದಷ್ಟು ಹಣ ನೀಡಲಾಗುವುದು. ಅಸ್ಸಾಂನ ಸಂಸ್ಕೃತಿ, ಪ್ರವಾಸೋದ್ಯಮ, ಪರಂಪರೆಯ ಸ್ಟೋರಿಲೈನ್ ಆಧಾರದಲ್ಲಿ ಚಿತ್ರ ನಿರ್ಮಿಸುವವರಿಗೆ ಹೆಚ್ಚುವರಿ 10 ಶೇ. ನೀಡಲಾಗುವುದು. ಒಂದು ವೇಳೆ 50 ಶೇ. ಅಥವಾ ಅದಕ್ಕಿಂತ ಹೆಚ್ಚಿನಷ್ಟು ಚಿತ್ರೀಕರಣ ಇಲ್ಲಿ ನಡೆದೆ ಇನ್ನೂ ಹೆಚ್ಚುವರಿ 10 ಶೇ.ದಷ್ಟು ಹಣ ನೀಡಲಾಗುವುದು” ಎಂದು ಪ್ರವಾಸೋದ್ಯಮ ಹಾಗು ಹಣಕಾಸು ಸಚಿವ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

2018ರ ಜನವರಿಯಿಂದ ಜಾರಿಗೆ ಬರಲಿರುವ ಈ ನೂತನ ಯೋಜನೆ 5 ವರ್ಷಗಳವರೆಗೆ ಇರಲಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೂ ಭಾರೀ ಸಬ್ಸಿಡಿಯನ್ನೂ ನೀಡಲಾಗುತ್ತದೆ ಎಂದವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News