ಮಠಂದೂರು ವಿರುದ್ಧ ಕಾಂಗ್ರೆಸ್‌ನಿಂದ ಕೊಣಾಜೆ ಠಾಣೆಗೆ ದೂರು

Update: 2017-10-20 10:18 GMT

ಕೊಣಾಜೆ, ಅ.20: ಸಚಿವ ಬಿ.ರಮಾನಾಥ ರೈ ಅವರ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಮುಖಂಡ ಸಂಜೀವ ಮಠಂದೂರು ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಣಾಜೆ ಠಾಣೆಗೆ ಶುಕ್ರವಾರ ದೂರು ನೀಡಲಾಯಿತು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಪ್ರಶಾಂತ್ ಕಾಜವ ಅವರು, ರಮಾನಾಥ ರೈಯಂತಹ ಹಿರಿಯ ಸಚಿವರ ಬಗ್ಗೆ ಸಂಜೀವ ಮಠಂದೂರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಮುಡಿಪು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ನೀಚ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿರುವ ಮಠಂದೂರು ವಿರುದ್ದ ಕೊಣಾಜೆ ಠಾಣೆಗೆ ದೂರು ನೀಡಿ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದೇವೆ. ಒಂದು ವೇಳೆ ಸಂಜೀಪ ಮಠಂದೂರು ಕ್ಷಮೆ ಯಾಚಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.

ಜಿಪಂ ಸದಸ್ಯೆ ಮಮತಾ ಗಟ್ಟಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತಿರುವ ಹಿರಿಯ ರಾಜಕಾರಣಿ ರಮಾನಾಥ ರೈ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಮಠಂದೂರಿನ ಯೋಗ್ಯತೆಯನ್ನು ತಿಳಿಸುತ್ತದೆ. ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ತಾಪಂ ಸದಸ್ಯ ಹೈದರ್ ಕೈರಂಗಳ, ಕಾಂಗ್ರೆಸ್ ಮುಖಂಡ ಉಮರ್ ಪಜೀರ್, ಕುರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಸೂಫಿ ಕುಂಞಿ, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಪ್ರದಾನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಮುಡಿಪು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ನಾಸಿರ್ ನಡುಪದವು, ಜಗದೀಶ್ ಭಟ್, ಬಶೀರ್ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News