ಪರ್ಕಳದಲ್ಲಿ ಪರಿಸರ ಸ್ನೇಹಿ ಬಿದಿರು ಪಟಾಕಿ ಸಂಭ್ರಮ!

Update: 2017-10-20 10:32 GMT

ಉಡುಪಿ, ಅ.20: ಪರ್ಕಳ ಸ್ವಾಗತ ಫ್ರೆಂಡ್ಸ್ ವತಿಯಿಂದ ಪರಿಸರ ಸ್ನೇಹಿ ಬಿದಿರು ಪಟಾಕಿಯನ್ನು ಸಿಡಿಸುವ ಮೂಲಕ ದೀಪಾವಳಿ ಹಬ್ಬವನ್ನು ಇಂದು ಪರ್ಕಳ ಪೇಟೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ಸುಮಾರು ಏಳು ಅಡಿ ಉದ್ದದ ಬಿದಿರಿಗೆ ತೂತು ಮಾಡಿ ಅದರಲ್ಲಿ ಒಂದು ಚಮಚದಷ್ಟು ಸೀಮೆಎಣ್ಣೆ ಸುರಿಸಲಾಗುತ್ತದೆ. ಬಳಿಕ ಸೈಕಲ್ ಪಂಪ್‌ನಿಂದ ಗಾಳಿ ಹಾಕಲಾಗುತ್ತದೆ. ಹೀಗೆ ಬಿದಿನ ಒಳಗೆ ಬಿಸಿಯಾಗುತ್ತಿದ್ದಂತೆ ಪಟಾಕಿ ಸಿಡಿದ ರೀತಿಯಲ್ಲಿ ಶಬ್ದವು ಕೇಳಿ ಬರುತ್ತದೆ. ಹೀಗೆ ಒಂದೊಂದೆ ಚಮಚ ಸೀಮೆಎಣ್ಣೆ ಹಾಕಿ ಪಟಾಕಿ ಸಿಡಿಸಬಹುದು. ಒಂದು ಲೀಟರ್ ಸೀಮೆಎಣ್ಣೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಪಟಾಕಿ ಸಿಡಿಸಬಹುದಾಗಿದೆ.

‘ಹಿಂದೆ ಇದನ್ನು ಪ್ರಾಣಿಗಳನ್ನು ಒಡಿಸಲು ಬಳಕೆ ಮಾಡುತ್ತಿದ್ದರು. ಸಂಪೂರ್ಣ ಮರೆಯಾಗಿದ್ದ ಈ ವಿಶಿಷ್ಟ ರೀತಿಯ ಪಟಾಕಿಯನ್ನು ಎರಡು ವರ್ಷಗಳ ಹಿಂದೆ ಬೆಳ್ಳಂಪಳ್ಳಿಯ ಪುರಂದರ ಕೋಟ್ಯಾನ್ ಪರಿಚಯಿಸಿದ್ದರು. ಅದರಂತೆ ಇಂದು ಸಾರ್ವಜನಿಕವಾಗಿ ಬಿದಿರು ಪಟಾಕಿ ಸಿಡಿಸಿ ಹಬ್ಬ ಆಚರಿಸಿದ್ದೇವೆ. ಇದರಿಂದ ಯಾವುದೇ ಪರಿಸರ ಮಾಲಿನ್ಯ ಆಗುವುದಿಲ್ಲ. ಗಾಳಿ ಹಾಕುವು ದರಿಂದ ಮಕ್ಕಳಿಗೆ ವ್ಯಾಯಮ ಕೂಡ ಆಗುತ್ತದೆ. ಅಲ್ಲದೆ ಇದು ಯಾವಾಗ ಸಿಡಿಯುತ್ತದೆ ಎಂಬ ಕುತೂಹಲವೂ ಇರುವುದರಿಂದ ಸಾಕಷ್ಟು ಸಂಭ್ರಮ ಪಡಬಹುದು’ ಎಂದು ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಮೋಹನ್‌ದಾಸ್ ನಾಯಕ್, ಸುಧಾಕರ್ ಶೆಟ್ಟಿ, ದೇವಿಪ್ರಸಾದ್, ರಾಜ್‌ಪ್ರಸಾದ್, ನಿತೀಶ್, ಆದರ್ಶ್ ಶೆಟ್ಟಿಗಾರ್, ಕಾರ್ತಿಕ್, ಜಯದೀಪ್, ಜಯರಾಮ್, ಉಪೇಂದ್ರ ನಾಯಕ್, ಸುರೇಶ್ ಆಚಾರ್ಯ ಮೊದಲಾದವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News