ರೈ ಎಸ್ಟೇಟ್ ಟ್ರಸ್ಟ್ ನಿಂದ 12,500 ಬಡವರಿಗೆ ಉಚಿತ ವಸ್ತ್ರ ವಿತರಣೆ

Update: 2017-10-20 10:49 GMT

ಪುತ್ತೂರು,ಅ.20: ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಧ್ಯೇಯ ದೇಶದ ಸಮಾಜದ ಕಟ್ಟ ಕಡೆಯ, ಕಷ್ಟದಲ್ಲಿರುವ ವ್ಯಕ್ತಿಗಳ ನೋವಿಗೆ ಸ್ಪಂದಿಸುವುದು ಮತ್ತು ಸಹಾಯ ಮಾಡುವುದಾಗಿತ್ತು. ನನ್ನ ಧೇಯವೂ ಅದೇ ಆಗಿದ್ದು, ದೀನ್‍ದಯಾಳ್ ಉಪಾಧ್ಯಾಯರ ಧ್ಯೇಯವನ್ನು ಮುಂದುವರಿಸುವ ನಿಟ್ಟಿನಲ್ಲಿ ರೈ ಎಸ್ಟೇಟ್ ಟ್ರಸ್ಟ್ ನ ವತಿಯಿಂದ ಕಷ್ಟದಲ್ಲಿರುವ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ನೋವಿಗೆ ಸ್ಪಂಧಿಸುವ ಕೆಲಸ ಮಾಡಲಾಗುತ್ತಿದೆ. ಇದು ಆಡಂಬರಕ್ಕಾಗಿ ಅಲ್ಲ, ಮನಸ್ಸಿನ ನೆಮ್ಮದಿಗಾಗಿ, ಈ ಕೆಲಸದಿಂದ ನನಗೆ ತೃಪ್ತಿ ಸಿಕ್ಕಿದೆ ಎಂದು ರೈ ಎಸ್ಟೇಟ್ ಮಾಲಕ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಹೇಳಿದರು. 

ಅವರು ಕೋಡಿಂಬಾಡಿಯ ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ  ಶುಕ್ರವಾರ ದೀಪಾವಳಿ ಪ್ರಯುಕ್ತ ತನ್ನ ಮನೆಯಲ್ಲಿ ನಡೆದ ಉಚಿತ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ 2013ರಲ್ಲಿ ಟ್ರಸ್ಟ್ ಆರಂಭಿಸಲಾಗಿದ್ದು, ಈ ಸಂದರ್ಭದಲ್ಲಿ 75 ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿತ್ತು. ಬಳಿಕ ಪ್ರತಿವರ್ಷವೂ ಹೆಚ್ಚುತ್ತಾ ಹೋಗಿ ಕಳೆದ ವರ್ಷ 7508 ಮಂದಿಗೆ ವಸ್ತ್ರ ವಿತರಣೆ ಮಾಡಲಾಯಿತು. ಈ ಬಾರಿ 12,500 ಮಂದಿಗೆ ವಸ್ತ್ರ ವಿತರಣೆ ಮಾಡಲಾಗುತ್ತಿದೆ ಎಂದರು.  

ಟ್ರಸ್ಟ್ ವತಿಯಿಂದ ಇನ್ನಿತರ ಸಮಾಜ ಕಾರ್ಯ ನಡೆಸಲಾಗುತ್ತಿದ್ದು , ಟ್ರಸ್ಟಿನಿಂದ ಮಂಗಳೂರಿನಲ್ಲಿರುವ ಎಚ್‍ಐವಿ ಪೀಡಿತ ಮಕ್ಕಳ ನಿಲಯದ 64 ಏಡ್ಸ್ ಪೀಡಿತ ಮಕ್ಕಳ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ. ಪೆರ್ನೆಯಲ್ಲಿ ನಡೆದ ಗ್ಯಾಸ್ ಟ್ಯಾಂಕರ್ ದುರಂತದಲ್ಲಿ ಹಾನಿಗೊಳಗಾದವರಿಗೆ ಸ್ಪಂದನೆ ನೀಡಲಾಗಿದೆ. 1ಸಾವಿರ ವಿದ್ಯಾರ್ಥಿಗಳಿಗೆ ಬಸ್ಸು ಪಾಸ್ ವ್ಯವಸ್ಥೆ ಮಾಡಲಾಗಿದೆ. 1600 ಕಾರ್ಮಿಕರನ್ನು ನೋಂದಾವಣೆ ಮಾಡಲಾಗಿದ್ದು, ಅವರಿಗೆ 3 ವರ್ಷಗಳ ತನಕ ಕಾರ್ಡು ನವೀಕರಣ ಶುಲ್ಕವನ್ನು ನೀಡಲಾಗುತ್ತಿದೆ. 3ಸಾವಿರ ಮಂದಿಯನ್ನು ಭವಿಷ್ಯನಿಧಿಗೆ ಜೋಡಣೆ ಮಾಡುವ ಕೆಲಸ ನಡೆದಿದೆ. 24 ಬಡ ಕುಟುಂಬಕ್ಕೆ ಮನೆ ನಿರ್ಮಾಣ, 26 ಮನೆಗಳ ದುರಸ್ತಿ, 16 ಮನೆಗಳಿಗೆ ವಿದ್ಯುತ್ ಸಂಪರ್ಕ, 35 ಕುಟುಂಬಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು. 
ಟ್ರಸ್ಟ್ ಮೂಲಕ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕೊಡಿಸುವ ಮತ್ತು ಸ್ವಉದ್ಯೋಗ ನಡೆಸಲು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ.

ಸ್ವಉದ್ಯೋಗದ ಹಿನ್ನಲೆಯಲ್ಲಿ ಯುವಕರಿಗೆ ಉಚಿತವಾಗಿ ವಾಹನ ತರಬೇತಿ ನೀಡಿ ಡ್ರೈವಿಂಗ್ ಲೈಸನ್ಸ್ ಮಾಡಿಕೊಡಲಾಗುತ್ತಿದೆ. ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸರ್ಕಾರದ ವಿವಿಧ ಯೋಜನೆಯನ್ನು ಬಡ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡುತ್ತಿದೆ.ಸರ್ಕಾರದ ಸೌಲಭ್ಯದ ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು,  ಅರ್ಜಿ ಸಲ್ಲಿಸಲು ಸಹಕರಿಸುವ ಕೆಲಸ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ. 1300 ಮಂದಿಗೆ ಉಚಿತ ಪಾನ್ ಕಾರ್ಡ್ ನೀಡಲಾಗಿದೆ.  ಆದಾರ್ ಕಾರ್ಡ್, ಪಾಸುಪೋರ್ಟು ಮಾಡಿಸಲು ಸಹಕಾರ ನೀಡಲಾಗುತ್ತಿದ್ದು, 94ಸಿ.94ಸಿಸಿ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತಿದೆ. ಮನೆ ದಾಖಲೆಗಳ ಸರಿಪಡಿಸಿಕೊಡುವ ಕೆಲಸವನ್ನೂ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಬಡಜನತೆಗೆ ಶಕ್ತಿ ತುಂಬುವ ಕೆಲಸವನ್ನು ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ ಎಂದರು. 

ರೈ ಎಸ್ಟೇಟ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‍ನ ನಿರ್ದೇಶಕಿಯಾದ ಅಶೋಕ್ ಕುಮಾರ್ ರೈ ಅವರ ತಾಯಿ ಗಿರಿಜಾ ಎಸ್. ರೈ ಅವರು ಭಾರತ ಮಾತೆಗೆ ಪೂಜನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಶೋಕ್ ರೈ ಅವರ ಪತ್ನಿ ಸುಮಾ ಎ. ರೈ, ಸಹೋದರರಾದ ಸುಬ್ರಹ್ಮಣ್ಯ ರೈ ಮತ್ತು ರಾಜ್‍ಕುಮಾರ್ ರೈ,  ಸಹೋದರಿಯರಾದ ವಿಶಾಲಾಕ್ಷಿ ಮತ್ತು ನಳಿನಿ ಶೆಟ್ಟಿ, ಅತ್ತಿಗೆ ಪ್ರೀತಿ ಆರ್,ರೈ ಮತ್ತಿತರರು ಉಪಸ್ಥಿತರಿದ್ದು, ವಸ್ತ್ರ ವಿತರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News