ಮಂಗಳೂರಿನ ಸಮಗ್ರ ಅಭಿವೃದ್ಧಿಗೆ 2,500 ಕೋ.ರೂ. ಮಂಜೂರು

Update: 2017-10-20 11:43 GMT

ಮಂಗಳೂರು, ಅ.20: ನಗರದ ಸಮಗ್ರ ಅಭಿವೃದ್ಧಿಗೆ ಸುಮಾರು 2,500 ಕೋ.ರೂ. ಅನುದಾನ ಮಂಜೂರಾಗುವ ನಿರೀಕ್ಷೆ ಇದೆ ಎಂದು ಶಾಸಕ ಜೆ.ರ್.ಲೋಬೊ ಹೇಳಿದರು.1.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಜಪ್ಪಿನಮೊಗರು ರಸ್ತೆ ಕಾಂಕ್ರಿಟೀಕರಣ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಅವರು ಮಾತನಾಡಿದರು.

ಅಭಿವೃದ್ಧಿಯಲ್ಲಿ ರಾಜಕೀಯವೇ ಇಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡುವ ದೃಷ್ಟಿಯಿಂದ ಎಡಿಬಿ ಎರಡನೆ ಹಂತದ ಕಾಮಗಾರಿಗೆ 600 ಕೋ.ರೂ.ಮಂಜೂರು ಮಾಡಿದ್ದಾರೆ ಎಂದು ಜೆ.ಆರ್.ಲೋಬೊ ಹೇಳಿದರು.

ನನ್ನ ಕ್ಷೇತ್ರವಲ್ಲದಿದ್ದರೂ ನಾನು ಮುತುವರ್ಜಿ ವಹಿಸಿ ಪಂಜಿಮೊಗರುವಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಗ್ರಾಮವಾಗಿ ಮಾಡಲು ಸುಮಾರು 1,000 ಎಕರೆ ಭೂಮಿಯನ್ನು ಗುರುತಿಸಿದ್ದೇನೆ ಎಂದ ಜೆ.ಆರ್.ಲೊಬೊ, ಉಳ್ಳಾಲ ನೇತ್ರಾವತಿ ಸೇತುವೆಯಿಂದ ಅಡ್ಯಾರ್ ಕಣ್ಣೂರು ಮಸೀದಿಯವರೆಗೆ ನದಿತೀರದಲ್ಲಿ ಚತುಷ್ಪಥ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಬೆಂಗಳೂರಿನಿಂದ ಅಧಿಕಾರಿಗಳ ತಂಡ ಬಂದು ಅಧ್ಯಯನ ನಡೆಸಿವೆ. ಇಲ್ಲಿಗೆ ಸುಮಾರು 400 ಕೋ.ರೂ. ಹೂಡಿಕೆ ಆಗಲಿದೆ. ಇದನ್ನು ಖಾಸಗಿ ಮತ್ತು ಸರಕಾರಿ ಒಡೆತನದಲ್ಲಿ ನಿರ್ಮಿಸಲಾಗುವುದು. ಇದು ಮಂಜೂರಾದರೆ ಜಪ್ಪಿನಮೊಗರು ಅಭಿವೃದ್ಧಿಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಮಂಗಳೂರು ಹಳೆ ಬಂದರು ಮತ್ತು ನವಮಂಗಳೂರು ಬಂದರಿಗೆ ಸಂಪರ್ಕ ಸಾಧಿಸುವ ಯೋಜನೆಯೂ ಇದೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಜನರ ಸಹಕಾರವಿದ್ದರೆ ಮಂಗಳೂರು ಅಭಿವೃದ್ಧಿಗೊಳ್ಳಲಿದೆ ಎಂದರು.

ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾರ್ಪೊರೇಟರ್ ಸುರೇಂದ್ರ, ಪ್ರವೀಣಚಂದ್ರ ಆಳ್ವ, ಸದಾನಂದ ಆಳ್ವ, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯ ಡೆನ್ನಿಸ್ ಡಿಸಿಲ್ವ, ಅರ್ಬರ್ಟ್ ಡಿಸೋಜ, ಅನಿಲ್ ಶೆಟ್ಟಿ, ದಿನೇಶ್ ಅಂಚನ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News