ಸಮಷ್ಟಿಪುರ: ಹಿಂಸೆಗೆ ತಿರುಗಿದ ಪ್ರತಿಭಟನೆ

Update: 2017-10-20 13:08 GMT

ಸಮಷ್ಟಿಪುರ(ಬಿಹಾರ),ಅ.20: ಔಷಧಿ ವ್ಯಾಪಾರಿಯೋರ್ವನ ಹತ್ಯೆಯನ್ನು ವಿರೋಧಿಸಿ ಸಮಷ್ಟಿಪುರ ಜಿಲ್ಲೆಯ ಅಸಾಧಿ ಗ್ರಾಮದಲ್ಲಿ ಶುಕ್ರವಾರ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸ್ ಗೋಲಿಬಾರ್‌ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಇತರ ಐವರು ಗಾಯಗೊಂಡಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರು ಘಟನೆಯ ಬಗ್ಗೆ ವಿಚಾರಣೆಗೆ ಆದೇಶಿಸಿದ್ದಾರೆ.

ಎರಡು ದಿನಗಳ ಹಿಂದೆ ಅಪರಿಚಿತ ದುಷ್ಕರ್ಮಿಗಳು ಔಷಧಿ ವ್ಯಾಪಾರಿಯನ್ನು ಕೊಲೆ ಮಾಡಿದ್ದರು. ಇದನ್ನು ವಿರೋಧಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರು ಎಂಟು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಡಿವೈಎಸ್‌ಪಿಯೋರ್ವರ ವಾಹನದ ಮೇಲೆ ದಾಳಿಗೂ ಅವರು ಮುಂದಾಗಿದ್ದರು. ಜನರನ್ನು ಚದುರಿಸಲು ಲಾಠಿಪ್ರಹಾರ ವಿಫಲಗೊಂಡ ಬಳಿಕ ಗೋಲಿಬಾರ್ ನಡೆಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು ಎಂದು ಎಸ್‌ಪಿ ದೀಪಕ ರಂಜನ್ ತಿಳಿಸಿದರು.

ಘಟನೆಯಲ್ಲಿ ಮೂವರು ಪೊಲೀಸರು ಮತ್ತು ಓರ್ವ ಸರಕಾರಿ ಅಧಿಕಾರಿಯೂ ಗಾಯಗೊಂಡಿದ್ದಾರೆ.

ಪರಿಸ್ಥಿತಿ ಉದ್ವಿಗ್ನಗೊಂಡಿತ್ತಾದರೂ ಅದೀಗ ನಿಯಂತ್ರಣದಲ್ಲಿದೆ ಮತ್ತು ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ರಂಜನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News