2015ರಲ್ಲಿ ಮಾಲಿನ್ಯಕ್ಕೆ ಬಲಿಯಾದ ಭಾರತೀಯರ ಸಂಖ್ಯೆಯೆಷ್ಟು ಗೊತ್ತೇ ?

Update: 2017-10-20 12:47 GMT

ಹೊಸದಿಲ್ಲಿ, ಅ20 : ದೇಶದಲ್ಲಿ ಮಾಲಿನ್ಯದಿಂದಾಗಿ 2015ರಲ್ಲಿ 25 ಲಕ್ಷ ಜನರು ಸಾವಿಗೀಡಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಧಿಕ ಸಾವಿನ ಪ್ರಮಾಣವಾಗಿದೆ ಎಂದು ‘ದಿ ಲ್ಯಾನ್ಸಟ್ ಕಮಿಷನ್ ಆನ್ ಪೊಲ್ಯೂಶನ್ ಆ್ಯಂಡ್ ಹೆಲ್ತ್’ ತಿಳಿಸಿದೆ. ಜಗತ್ತಿನಾದ್ಯಂತ ಮಾಲಿನ್ಯದಿಂದುಂಟಾದ ಸಾವಿನ ಪ್ರಮಾಣ 90 ಲಕ್ಷದಷ್ಟಾಗಿದ್ದು ಇದು ಏಡ್ಸ್, ಟಿಬಿ ಹಾಗೂ ಮಲೇರಿಯಾದಿಂದುಂಟಾಗುವ ಒಟ್ಟು ಸಾವಿನ ಸಂಖ್ಯೆಗಿಂತಲೂ ಅಧಿಕ ಎಂದು ವರದಿ ತಿಳಿಸಿದೆ.

ಚೀನಾದಲ್ಲಿ ಮಾಲಿನ್ಯದಿಂದ 2015ರಲ್ಲಿ 18 ಲಕ್ಷ ಜನರು ಸಾವಿಗೀಡಾಗಿದ್ದು ಈ ನಿಟ್ಟಿನಲ್ಲಿ ಅದು ಭಾರತದ ನಂತರದ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಸಂಭವಿಸುವ ಪ್ರತಿ ಆರು ಸಾವುಗಳಲ್ಲಿ ಒಂದು ಸಾವು ಮಾಲಿನ್ಯದಿಂದ ಸಂಭವಿಸುತ್ತದೆ ಎಂದೂ ವರದಿ ತಿಳಿಸಿದೆ.

ಸುಮಾರು 40 ಮಂದಿ ಅಂತಾರಾಷ್ಟ್ರೀಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಆಧಾರದಲ್ಲಿ ಈ ವರದಿ ಸಿದ್ಧ ಪಡಿಸಲಾಗಿದ್ದು ಅದಕ್ಕಾಗಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುವೇಶನ್ ಇಲ್ಲಿ ತಯಾರಿಸಿದ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿಯಲ್ಲಿನ ಮಾಹಿತಿಯನ್ನು ಉಪಯೋಗಿಸಲಾಗಿತ್ತು.

ಹೆಚ್ಚುತ್ತಿರುವ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ದಿಲ್ಲಿಯಲ್ಲಿ ಪಟಾಕಿ ನಿಷೇಧಿಸಿ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಈ ವರದಿ ಮಹತ್ವ ಪಡೆದಿದೆ. ಆದೇಶದ ಹೊರತಾಗಿಯೂ ದೀಪಾವಳಿಯ ರಾತ್ರಿಯಂದು ದಿಲ್ಲಿಯಲ್ಲಿನ ಮಾಲಿನ್ಯ ಪ್ರಮಾಣ ಭಾರೀ ಏರಿಕೆಯಾಗಿತ್ತು. ಚೆನ್ನೈ ನಗರದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕೊಲ್ಕತ್ತಾದ ರಬೀಂದ್ರ ಭಾರತಿ ವಿಶ್ವವಿದ್ಯಾಲಯ ಪ್ರದೇಶದಲ್ಲೂ ಮಾಲಿನ್ಯ ಮಟ್ಟ ತೀರಾ ಕಳವಳಕಾರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News