ಸೆಹ್ವಾಗ್ ಹುಟ್ಟುಹಬ್ಬಕ್ಕೆ ‘ಉಲ್ಟಾ’ ಶುಭಾಶಯ ಕೋರಿದ ಸಚಿನ್!

Update: 2017-10-20 16:05 GMT

ಹೊಸದಿಲ್ಲಿ, ಅ.20: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮೆನ್ ವಿರೇಂದ್ರ ಸೆಹ್ವಾಗ್ ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಜಾಫ್ ಗರ್ ನ ಈ ಬ್ಯಾಟ್ಸ್ ಮೆನ್ ಇಂದು ತಮ್ಮ 39ನೆ ಹುಟ್ಟುಹಬ್ಬವನ್ನು ಆಚರಿಸಿದ್ದು, ಕ್ರಿಕೆಟಿಗರು, ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭ ಹಾರೈಸಿದ್ದಾರೆ.

ಈ ಎಲ್ಲಾ ಹಾರೈಕೆಗಳ ನಡುವೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಶುಭಹಾರೈಕೆ ಎಲ್ಲರ ಗಮನಸೆಳೆದಿದೆ. ಎಲ್ಲರಿಗಿಂತ ವಿಭಿನ್ನವಾಗಿ ವೀರೂಗೆ ಶುಭ ಹಾರೈಸಿದ್ದಾರೆ ಸಚಿನ್.

“ಹುಟ್ಟುಹಬ್ಬದ ಶುಭಾಶಯಗಳು ವೀರೂ! ಫೀಲ್ಡ್ ನಲ್ಲಿ ಯಾವಾಗಲೂ ನಾನು ಹೇಳಿದ್ದರ ‘ಉಲ್ಟಾ’ವನ್ನೇ ನೀವು ಮಾಡುತ್ತಿದ್ದಿರಿ. ಹಾಗಾಗಿ ಇದು ನಿಮಗಾಗಿ” ಎಂದು ಸಚಿನ್ ಅಕ್ಷರಗಳನ್ನು ತಲೆಕೆಳಗಾಗಿ ಬರೆದು ಸೆಹ್ವಾಗ್ ಗೆ 'ಉಲ್ಟಾ ವಿಶ್' ಮಾಡಿದ್ದಾರೆ.

ಸಚಿನ್ ಅವರ ಟ್ವೀಟ್ ಟ್ವಿಟ್ಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್, “ಧನ್ಯವಾದ ದೇವರೇ! ಮೇಲಿದ್ದವನು ಎಲ್ಲವನ್ನೂ ನೋಡುತ್ತಾನೆ ಎಂದು ನಾನು ಕೇಳಿದ್ದೆ. ಕೆಳಗಿದ್ದವರಿಗಾಗಿ ಆತ ಹೇಗೆ ಬರೆಯುತ್ತಾನೆ ಎನ್ನುವುದು ಇಂದು ಅರ್ಥವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯಕ್ಕೆ ಈ ಇಬ್ಬರ ಉಲ್ಟಾ ಟ್ವೀಟ್ ಗಳು ಟ್ವಿಟ್ಟರ್ ನಲ್ಲಿ ಫೇಮಸ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News