ಮಂಗಳೂರು; ವೆಬ್‌ಸೈಟ್‌ನಲ್ಲಿ ಕಾರು ಮಾರಾಟದ ಜಾಹಿರಾತು ನಂಬಿ ಮೋಸ ಹೋದ ವ್ಯಕ್ತಿ

Update: 2017-10-21 17:30 GMT

ಮಂಗಳೂರು, ಅ.21: ವೆಬ್‌ಸೈಟ್‌ವೊಂದರಲ್ಲಿ ಕಾರು ಮಾರಾಟದ ಜಾಹಿರಾತಿನ ಆಧಾರದ ಮೇಲೆ ವ್ಯವಹರಿಸಿದ ವ್ಯಕ್ತಿಯೊಬ್ಬರು ಮೋಸ ಹೋದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಅಬ್ದುಲ್ ನಾಸಿರ್ ಎಂಬವರು ಅ.6ರಂದು ವೆಬ್‌ಸೈಟ್‌ವೊಂದರಲ್ಲಿ ಕಾರು ಮಾರಾಟದ ಜಾಹಿರಾತು ಗಮನಿಸಿ ಆ ಕಾರನ್ನು ಖರೀದಿಸಲು ಮುಂದಾದರು. ಅದರಂತೆ ಜಾಹಿರಾತಿನಲ್ಲಿ ತಿಳಿಸಿದ ವ್ಯಕ್ತಿಗೆ ಕಾರಿನ ಬಗ್ಗೆ ಸಂದೇಶ ಕಳುಹಿಸಿದರು. ಬಳಿಕ ನಾಸಿರ್‌ಗೆ ಫೋನ್ ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ಗೌನ್ಸ್, ತಾನು ಡಾಕ್ಟರ್ ಎಂದು ಇಂಗ್ಲಿಷ್‌ನಲ್ಲಿ ತಿಳಿಸಿದ. ತನಗೆ ಇಂಗ್ಲಿಷ್ ಬರುವುದಿಲ್ಲ ಎಂದು ನಾಸಿರ್ ತಿಳಿಸಿದಾಗ ಆ ವ್ಯಕ್ತಿ ಇನ್ನೊಂದು ಮೊಬೈಲ್ ಸಂಖ್ಯೆ ನೀಡಿ ಬೆಂಗಳೂರು ಏರ್‌ಪೋರ್ಟ್‌ಗೆ ಬರುವಂತೆ ಸೂಚಿಸಿದರು.

ಹಾಗೇ ನಾಸಿರ್ ಅ.13ರಂದು ಬೆಂಗಳೂರಿಗೆ ತೆರಳಿ ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಮಹಿಳೆ ತನ್ನನ್ನು ಅನಿತಾ ಕುಮಾರಿ ಎಂದು ಕನ್ನಡದಲ್ಲಿ ಪರಿಚಯಿಸಿ ನೀವು ಖರೀದಿಸಲು ಬಯಸುವ ಸ್ವಿಫ್ಟ್ ಕಾರು ಏರ್‌ಪೋರ್ಟ್ ಪಾರ್ಕಿಂಗ್‌ನಲ್ಲಿದೆ. ಅದರ ಪಾರ್ಕಿಂಗ್ ಶುಲ್ಕ 87,000 ರೂ. ಪಾವತಿಸಲು ಸೂಚಿಸಿದರು. ನಾಸಿರ್ ತನ್ನಲ್ಲಿ ಅಷ್ಟೊಂದು ಹಣ ಇಲ್ಲ ಎಂದಾಗ ಆ ಮಹಿಳೆ ಜೆ.ಸಿ.ಪ್ರಕಾಶ್ ಎಂಬವರ ಖಾತೆಗೆ 25,000 ರೂ.ವನ್ನು ಜಮೆ ಮಾಡಲು ಹೇಳಿದರು. ಅದರಂತೆ ನಾಸಿರ್ ಮಂಗಳೂರಿನಲ್ಲಿರುವ ತನ್ನ ಅಣ್ಣ ಆಸೀಫ್ ಬಳಿ ಸದ್ರಿ ಖಾತೆಗೆ 25,000 ರೂ. ಹಾಕಲು ತಿಳಿಸಿದರು. ಸ್ವಲ್ಪ ಹೊತ್ತಿನಲ್ಲಿ ಅದೇ ನಂಬ್ರದಿಂದ ಕರೆ ಮಾಡಿದ ಮಹಿಳೆ ಇನ್ನೂ 25,000 ರೂ. ಜಮೆ ಮಾಡಲು ತಿಳಿಸಿದರು. ಅದರಂತೆ ಮತ್ತೆ 25,000 ರೂ. ಪುನ: ಅದೇ ಅಕೌಂಟ್‌ಗೆ ಹಾಕಲಾಯಿತು.

ಆ ಬಳಿಕ ಅನಿತಾ ಕುಮಾರಿಗೆ ಅನೇಕ ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಬಳಿಕ ಗೌನ್ಸ್‌ರನ್ನು ಸಂಪರ್ಕಿಸಿದಾಗ ‘ನೀವು ಈಗ ಹೊರಡಿ. ನಾಳೆ ನೀವು ಕಾರು ನೋಡಿ. ಒಂದಾ ನಿಮಗೆ ಕಾರು ನೀಡುತ್ತೇವೆ. ಇಲ್ಲವಾದಲ್ಲಿ ನೀವು ಕಟ್ಟಿದ 50,000 ರೂ. ವಾಪಸ್ ನೀಡುತ್ತೇವೆ’ ಎಂದರು. ಬಳಿಕ ಇಬ್ಬರ ಮೊಬೈಲ್ ಸ್ವಿಚ್ಚ್ ಆಫ್ ಆಗಿದೆ ಎಂದು ಜಾಹಿರಾತು ವೀಕ್ಷಿಸಿ ಮೋಸ ಹೋದ ನಾಸಿರ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News