ನಾಳೆ ಸ್ಪೇನ್-ಇರಾನ್, ಜರ್ಮನಿ-ಬ್ರೆಝಿಲ್ ಹಣಾಹಣಿ

Update: 2017-10-21 18:17 GMT

ಕೊಚ್ಚಿ, ಅ.21: ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯ ಕೊನೆಯ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು ರವಿವಾರ ನಡೆಯಲಿದೆ. ಕೊಚ್ಚಿಯಲ್ಲಿ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಹಾಗೂ ಇರಾನ್ ತಂಡಗಳು ಮುಖಾಮುಖಿಯಾಗಲಿವೆ. ಕೋಲ್ಕತಾದಲ್ಲಿ ನಡೆಯಲಿರುವ ಮತ್ತೊಂದು ಅಂತಿಮ-8ರ ಪಂದ್ಯದಲ್ಲಿ ಜರ್ಮನಿ ವಿರುದ್ಧ ಬ್ರೆಝಿಲ್ ಹೋರಾಟ ನಡೆಸಲಿದೆ.

ರವಿವಾರ ಸಂಜೆ 5ಕ್ಕೆ ನಡೆಯಲಿರುವ ಪಂದ್ಯದಲ್ಲಿ ಇರಾನ್ ತಂಡ ಸ್ಪೇನ್ ವಿರುದ್ಧ ಐತಿಹಾಸಿಕ ಜಯ ಸಾಧಿಸುವ ವಿಶ್ವಾಸದಲ್ಲಿದೆ. ಏಷ್ಯಾದ ಬಲಿಷ್ಠ ತಂಡ ಇರಾನ್ ಈತನಕ ಟೂರ್ನಿಯಲ್ಲಿ ಆಡಿರುವ ಎಲ್ಲ 4 ಪಂದ್ಯಗಳನ್ನು ಜಯಿಸಿದೆ. ಪ್ರತಿ ಪಂದ್ಯದಲ್ಲಿ ಸರಾಸರಿ 3 ಗೋಲುಗಳನ್ನು ಬಾರಿಸಿದೆ. ಗೋವಾದಲ್ಲಿ ನಡೆದಿದ್ದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮೆಕ್ಸಿಕೊವನ್ನು 2-1 ರಿಂದ ಮಣಿಸಿತ್ತು.

 ಟೂರ್ನಿಯ ಮೊದಲ ಪಂದ್ಯದಲ್ಲಿ ಬ್ರೆಝಿಲ್ ವಿರುದ್ಧ ಸೋತಿದ್ದ ಯುರೋ ಚಾಂಪಿಯನ್ ಸ್ಪೇನ್ ತಂಡ ಆ ಬಳಿಕ ನೈಜರ್ ಹಾಗೂ ಕೊರಿಯಾ ವಿರುದ್ಧ ಸುಲಭ ಜಯ ಸಾಧಿಸಿ ಅಂತಿಮ-16ರ ಸುತ್ತಿಗೇರಿತ್ತು. ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-1 ರಿಂದ ಜಯಿಸಿ ತನ್ನ ಶಕ್ತಿ ಪ್ರದರ್ಶನ ಮಾಡಿರುವ ಸ್ಪೇನ್ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಸ್ಪೇನ್ ನಾಯಕ ಅಬೆಲ್ ರುಯೆಝ್ ಒಟ್ಟು 21 ಗೋಲುಗಳನ್ನು ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

 ಇರಾನ್ ತಂಡ ಇದೇ ಮೊದಲ ಬಾರಿ ಅಂಡರ್-17 ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದು, ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ.

ಜರ್ಮನಿಗೆ ಬ್ರೆಝಿಲ್ ಸವಾಲು

ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಬ್ರೆಝಿಲ್ ತಂಡ ರಾತ್ರಿ 8ಕ್ಕೆ ಕೋಲ್ಕತಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜರ್ಮನಿಯನ್ನು ಎದುರಿಸಲಿದೆ.

ಜರ್ಮನಿ-ಬ್ರೆಝಿಲ್ ತಂಡಗಳು ಏಳು ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಬ್ರೆಝಿಲ್ 3 ಬಾರಿ ಜಯ ಸಾಧಿಸಿದರೆ, ಜರ್ಮನಿ ಎರಡು ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

2011ರಲ್ಲಿ ಮೆಕ್ಸಿಕೊದಲ್ಲಿ ಮೂರನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿವೆ. ಆ ಪಂದ್ಯವನ್ನು ಜರ್ಮನಿ 4-3 ಅಂತರದಿಂದ ಗೆದ್ದುಕೊಂಡಿತ್ತು.

ಜರ್ಮನಿಯ ನಾಯಕ ಹಾಗೂ ಫಾರ್ವರ್ಡ್ ಆಟಗಾರ ಜಾನ್-ಫಿಯೆಟ್ ಅರ್ಪ್ ಒಟ್ಟು 4 ಗೋಲುಗಳನ್ನು ಬಾರಿಸಿದ್ದಾರೆ.
 

ಕ್ವಾ.ಫೈನಲ್ ಪಂದ್ಯಗಳು

►ಸ್ಪೇನ್-ಇರಾನ್

   ಸ್ಥಳ: ಕೊಚ್ಚಿ, ಸಮಯ: ಸಂಜೆ 5:00

►ಜರ್ಮನಿ-ಬ್ರೆಝಿಲ್

   ಸ್ಥಳ: ಕೋಲ್ಕತಾ, ಸಮಯ:ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News