ಕುಡ್ತಮುಗೇರು: ಯುವತಿಯನ್ನು ಮುಂದಿಟ್ಟು ನಗ-ನಗದು ದೋಚಿದ ತಂಡ

Update: 2017-10-22 08:22 GMT

ವಿಟ್ಲ, ಅ.22: ತಂಡವೊಂದು ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಕಾರು ಸಹಿತ ನಗ-ನಗದು ದೋಚಿ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ಶನಿವಾರ ನಡೆದಿರುವುದು ವರದಿಯಾಗಿದೆ.

ಇದೊಂದು ಹನಿಟ್ರಾಪ್ ಪ್ರಕರಣ ಎಂದು ತಿಳಿದು ಬಂದಿದೆ. ವಿಟ್ಲ -ಪರ್ತಿಪ್ಪಾಡಿ ನಿವಾಸಿ ಮುಹಮ್ಮದ್ ಹನೀಫ್ (32) ತಂಡದಿಂದ ಹಲ್ಲೆಗೊಳಗಾದವರು. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡುಬಿದಿರೆಯಲ್ಲಿ ಉದ್ಯೋಗಿಯಾಗಿರುವ ಹನೀಫ್ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ಬಾಡಿಗೆಯ ಫ್ಲಾಟ್‌ನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಹನೀಫ್‌ರಿಗೆ ಶನಿವಾರ ಮಧ್ಯರಾತ್ರಿ ಕರೆ ಮಾಡಿ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಹಣಕಾಸಿನ ನೆರವು ಕೋರಿದ್ದಾಳೆನ್ನ್ನಲಾಗಿದೆ.

ಇದಕ್ಕೆ ಸ್ಪಂದಿಸಿದ ಹನೀಫ್‌ನನ್ನು ಯುವತಿ ತನ್ನೊಬ್ಬಳು ಗೆಳತಿಯೊಂದಿಗೆ ಮುಡಿಪುವಿನಲ್ಲಿ ಭೇಟಿಯಾಗಿದ್ದಾಳೆ. ಈ ಸಂದರ್ಭ ಕರೆ ಮಾಡಿದಾಕೆ ತನ್ನ ಜೊತೆಗಿದ್ದ ಯುವತಿಯನ್ನು ಹನೀಫ್ ಜತೆ ಕುಡ್ತಮುಗೇರುನಲ್ಲಿರುವ ಮನೆಗೆ ಕಳುಹಿಸಿ, ತಾನು ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬರುತ್ತೇನೆ ಎಂದಿದ್ದಾಳೆ. ಅದೇರೀತಿ ಹನೀಫ್ ತನ್ನ ಸ್ವಿಫ್ಟ್ ಕಾರಿನಲ್ಲಿ ಯುವತಿಯನ್ನು ತನ್ನ ಮನೆಗೆ ಕರೆತಂದಿದ್ದಾರೆ. ಅವರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಟವೆರಾ ಕಾರಿನಲ್ಲಿ ಬಂದ ಆರು ಜನರ ತಂಡ ಹನೀಫ್ ಮನೆಗೆ ನುಗ್ಗಿದೆ ಎಂದು ಹೇಳಲಾಗಿದೆ.

ಬಳಿಕ ಹನೀಫ್‌ನನ್ನು ಕಟ್ಟಿ ಹಾಕಿದ ತಂಡ ಹಲ್ಲೆ ನಡೆಸಿ ಯುವತಿ ಜತೆ ಬೆತ್ತಲೆ ನಿಲ್ಲಿಸಿ ವೀಡಿಯೊ ಹಾಗೂ ಫೋಟೊ ತೆಗೆದು 5 ಲಕ್ಷ ರೂ. ನೀಡುವಂತೆ ಒತ್ತಾಯಿಸಿದೆ. ರಾತ್ರಿ ಎರಡು 2ರಿಂದ ಬೆಳಗ್ಗಿನ ಜಾವ 4 ಗಂಟೆಯವರೆಗೆ ತಂಡ ಹನೀಫ್‌ಗೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಹನೀಫ್ ಹಣ ನೀಡದಿದ್ದಾಗ ತಂಡವು ಮನೆಯ ಕಪಾಟಿನಲ್ಲಿದ್ದ ಏಳು ಪವನ್ ಚಿನ್ನಾಭರಣ, ನಗದು, ಪಾಸ್‌ಪೋರ್ಟ್, ವಾಚ್, ಮೊಬೈಲ್ ಫೋನ್ ಹಾಗೂ ಸ್ವಿಫ್ಟ್ ಕಾರನ್ನು ದೋಚಿ ಪರಾರಿಯಾಗಿದೆ ಎಂದು ಹನೀಫ್ ವಿಟ್ಲ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News