ಗೋಧ್ರಾದಲ್ಲಿ ಮುಸ್ಲಿಮರನ್ನು ಭೇಟಿಯಾದ ಹಾರ್ದಿಕ್ ಪಟೇಲ್

Update: 2017-10-22 16:35 GMT

ಹೊಸದಿಲ್ಲಿ, ಆ. 21: ಗೋಧ್ರಾದಲ್ಲಿ ರವಿವಾರ ಮುಸ್ಲಿಂ ಸಮುದಾಯವನ್ನು ಭೇಟಿಯಾಗಿರುವ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕ ಹಾರ್ದಿಕ್ ಪಟೇಲ್, ಈ ದೇಶದಲ್ಲಿ ಉತ್ತಮ ಸರಕಾರಕ್ಕಾಗಿ ನಾವು ಸಂಘಟಿತರಾಗಿ ಹೋರಾಡಬೇಕು ಎಂದಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯದ್ದು ವಿಭಜಿಸಿ ಆಳುವ ನೀತಿ. ಅದು ಮುಸ್ಲಿಂ ಸಮುದಾಯವನ್ನೂ ವಿಭಜಿಸಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಬೇಕು ಎಂದರು.

ಹಾರ್ದಿಕ್ ಪಟೇಲ್ ಅವರನ್ನು ಸಮ್ಮಾನಿಸಿದ ಗುಜಿರಿ ವ್ಯಾಪಾರಿ ಅನ್ವರ್ ಕಲಂದರ್, ಹಾರ್ದಿಕ್ ಅವರು ಅವರ ಸಮುದಾಯಕ್ಕಾಗಿ ಏನು ಮಾಡುತ್ತಾರೋ ಅದನ್ನು ಬೆಂಬಲಿಸಲು ನಾನು ಇಲ್ಲಿಗೆ ಬಂದಿರುವೆ ಎಂದರು.

ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ ಸಿ.ಕೆ. ರಾವ್ಲಜಿ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಅವರು, ನಾನು ಇಲ್ಲಿಗೆ ಬಂದಿರುವುದು ನಿಮ್ಮ ಸಮಸ್ಯೆ ಹಾಗೂ ಹಕ್ಕುಗಳಿಗಾಗಿ ಹೋರಾಡಲು. ನಮಗೆ ದ್ರೋಹ ಎಸಗಿದವರಿಗೆ ಪಾಠ ಕಲಿಸಲು ಇದು ಉತ್ತಮ ಸಮಯ ಎಂದರು.

 ವಡೋದರಾದ ವಾಘೋಡಿಯಾ ತಾಲೂಕಿನ ಮಧೇಲಿ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷ ಸೇರಲಾರೆ. ನಾನು ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತೇನೆ. ಗುಜರಾತ್‌ನಲ್ಲಿ ಮೀಸಲಾತಿ, ಯುವಜನಾಂಗಕ್ಕೆ ಉದ್ಯೋಗ, ರೈತರ ಸಾಲ ಮನ್ನಾಕ್ಕೆ ನಾವು ಬದ್ಧರಾಗಬೇಕು. ಇದನ್ನು ಒಪ್ಪುವ ಪಕ್ಷಕ್ಕೆ ನಾವು ಬೆಂಬಲ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.

 ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ರೈತರಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಈ ಹಿಂದೆ ರೈತರು ತಮ್ಮ ಮಕ್ಕಳ ವಿವಾಹ ನೆರವೇರಿಸಲು ಸಾಕಷ್ಟು ಗಳಿಸುತ್ತಿದ್ದರು. ಆದರೆ, ಈಗ ತಮ್ಮ ಮಕ್ಕಳ ಉನ್ನತ ವಿದ್ಯಾಭ್ಯಾಸದ ಶುಲ್ಕ ನೀಡುವಷ್ಟು ಗಳಿಸಲು ಕೂಡ ವಿಫಲರಾಗುತ್ತಿದ್ದಾರೆ ಎಂದರು. ಕುರುಡಾಗಿ ಮತ ಹಾಕಬೇಡಿ ಯಾವುದೇ ಪಕ್ಷಕ್ಕೆ ಕುರುಡಾಗಿ ಮತ ಹಾಕಬೇಡಿ. ಕಾಂಗ್ರೆಸ್ ಹಾಗೂ ಬಿಜೆಪಿ-ಎರಡೂ ಪಕ್ಷಗಳು ಸೋದರ ಸಂಬಂಧಿ. ಕಾಂಗ್ರೆಸ್ ಕಳ್ಳನಾದರೆ, ಬಿಜೆಪಿ ದೊಡ್ಡ ಕಳ್ಳ ಎಂದರು.

  ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಹಾಕಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ನೆನಪಿಸುವಂತೆ ತಂದೆಗೆ ಹೇಳಿದ್ದೇನೆ. ಇದುವರೆಗೆ ನಮ್ಮ ಖಾತೆಗೆ ಹಾಕಿಲ್ಲ. ಆದರೆ, ಜಯ್ ಶಾ ಖಾತೆಗೆ ಜಮೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News