ನ್ಯಾಯಾಧೀಶರ ಸಾಧನೆ ಮೌಲ್ಯಮಾಪನ ಕೈ ಬಿಡುವ ಕೊಲಿಜಿಯಂ ನಿರ್ಧಾರಕ್ಕೆ ಸರಕಾರದ ಕೆಂಪು ನಿಶಾನೆ

Update: 2017-10-22 16:49 GMT

ಹೊಸದಿಲ್ಲಿ,ಅ.22: ಉಚ್ಚ ನ್ಯಾಯಾಲಯದ ಖಾಯಂ ನ್ಯಾಯಾಧೀಶರಾಗಿ ಬಡ್ತಿಗೆ ಹೆಚ್ಚುವರಿ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವಾಗ ಅವರ ವೃತ್ತಿಪರ ಸಾಧನೆಗಳ ಮೌಲ್ಯಮಾಪನವನ್ನು ಮಾಡುವ ಪದ್ಧತಿಯನ್ನು ಕೈಬಿಡುವ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನಿರ್ಧಾರಕ್ಕೆ ಕೇಂದ್ರ ಸರಕಾರವು ಕೆಂಪು ನಿಶಾನೆಯನ್ನು ತೋರಿಸಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಐವರು ಹಿರಿಯ ನ್ಯಾಯಾಧೀಶರ ಸಮಿತಿಯಾಗಿರುವ ಕೊಲಿಜಿಯಂ ನಿರ್ಧಾರ ಮತ್ತು ಅದಕ್ಕೆ ಕಾನೂನು ಸಚಿವಾಲಯದ ವಿರೋಧವು ನ್ಯಾಯಾಂಗ ಮತ್ತು ಕಾರ್ಯಾಂಗಗಳ ನಡುವೆ ಹೊಸ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ.

ತೀರ್ಪುಗಳ ಮೌಲ್ಯಮಾಪನ ಸಮಿತಿಯು ತೀರ ಇತ್ತೀಚಿನವರೆಗೂ ಹೆಚ್ಚುವರಿ ನ್ಯಾಯಾಧೀಶರ ಹೆಸರನ್ನು ಕಾಯಂ ನ್ಯಾಯಾಧೀಶರಾಗಿ ಬಡ್ತಿಗೆ ಶಿಫಾರಸು ಮಾಡುವಾಗ ಅವರ ನ್ಯಾಯಿಕ ಸಾಧನೆಯ ಮೌಲ್ಯಮಾಪನ ಮಾಡುತ್ತಿತ್ತು. ಇದನ್ನು ಕೈಬಿಡುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರಕಾರವು ಕೊಲಿಜಿಯಂ ಅನ್ನು ಆಗ್ರಹಿಸಿದೆ.

  ಕಳೆದ ಮಾರ್ಚ್‌ನಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರು ಸಾಧನೆಗಳ ಮೌಲ್ಯಮಾಪನ ಪದ್ಧತಿಯನ್ನು ಕೈ ಬಿಡಲು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನಿರ್ಧರಿಸಿದೆ ಎಂದು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರಿಗೆ ತಿಳಿಸಿದ್ದರು.

1981ರ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಉಲ್ಲೇಖಿಸಿದ್ದ ಅವರು, ಹೆಚ್ಚುವರಿ ನ್ಯಾಯಾಧೀಶರ ಸಾಧನೆಗಳ ಮೌಲ್ಯಮಾಪನ ಪದ್ಧತಿಯು ಈ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೂ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News