ಭಾರತ ಜೂನಿಯರ್ ತಂಡಕ್ಕೆ ಜಯ

Update: 2017-10-22 18:24 GMT

ಜೊಹೊರ್ ಬಾಹ್ರು(ಮಲೇಷ್ಯಾ), ಅ.22: ದಿಲ್‌ಪ್ರಿತ್ ಸಿಂಗ್ ಅವಳಿ ಗೋಲು ಹಾಗೂ ಸುಖ್‌ಜೀತ್ ಸಿಂಗ್ ಒಂದು ಗೋಲು ನೆರವಿನಿಂದ ಭಾರತದ ಜೂನಿಯರ್ ಪುರುಷರ ಹಾಕಿ ತಂಡ ಸುಲ್ತಾನ್ ಜೊಹೊರ್ ಕಪ್‌ನಲ್ಲಿ ಶುಭಾರಂಭಮಾಡಿದೆ.

ರವಿವಾರ ನಡೆದ ಜಪಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ತಂಡ 3-2 ಅಂತರದಿಂದ ರೋಚಕ ಜಯ ದಾಖಲಿಸಿದೆ.

ದಿಲ್‌ಪ್ರೀತ್ 11ನೆ ಹಾಗೂ 53ನೆ ನಿಮಿಷದಲ್ಲಿ ಗೋಲು ಬಾರಿಸಿದರೆ, ಸುಖ್‌ಜೀತ್ ಸಿಂಗ್ 41ನೆ ನಿಮಿಷದಲ್ಲಿ ಗೋಲು ಬಾರಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು. ಜಪಾನ್‌ನ ಪರ ಕಿಯೊಹಿ ಒಗಾವಾ 23ನೆ ಹಾಗೂ 31ನೆ ನಿಮಿಷದಲ್ಲಿ ಅವಳಿ ಗೋಲು ಬಾರಿಸಿದ್ದಾರೆ.

ಭಾರತ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. 11ನೆ ನಿಮಿಷದಲ್ಲಿ ಭಾರತದ ಪ್ರಯತ್ನಕ್ಕೆ ಫಲ ಲಭಿಸಿತು. ದಿಲ್‌ಪ್ರೀತ್ ಭಾರತದ ಗೋಲು ಖಾತೆ ತೆರೆದರು. ಎರಡನೆ ಕ್ವಾರ್ಟರ್‌ನಲ್ಲಿ ಜಪಾನ್ ಆಟಗಾರರು ತೀವ್ರ ಪೈಪೋಟಿ ನೀಡಿದರು. 23ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದರು. ಗೋಲು ಬಾರಿಸಿದ ಒಗಾವಾ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. 31ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಒಗಾವಾ ಮೊದಲಾರ್ಧದ ಅಂತ್ಯಕ್ಕೆ ಜಪಾನ್ 2-1 ಮುನ್ನಡೆ ಸಾಧಿಸಿತು.

ಭಾರತದ ಯುವ ಆಟಗಾರರು ಮೂರನೆ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಿದರು. 41ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ಸುಖ್‌ಜೀತ್ ಸಿಂಗ್ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು.

53ನೆ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಭಾರತದ ಪರ ಗೆಲುವಿನ ಗೋಲು ಬಾರಿಸಿದರು. ಭಾರತ ಅಕ್ಟೋಬರ್ 23 ರಂದು ಆತಿಥೇಯ ಮಲೇಷ್ಯಾವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News