ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳಿಂದ ದೋಷಾರೋಪ ನಿರಾಕರಣೆ

Update: 2017-10-23 08:59 GMT

ಉಡುಪಿ, ಅ. 23: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಐವರು ಆರೋಪಿಗಳ ವಿರುದ್ಧದ ದೋಷಾರೋಪವನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಇಂದು ವಾಚಿಸಿದ್ದು, ಆರೋಪಿಗಳು ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಆರಂಭಿಸುವ ದಿನವನ್ನು ನ. 28ಕ್ಕೆ ನಿದಿಪಡಿಸುವುದಾಗಿ ಆದೇಶ ನೀಡಿದರು.

ಮಂಗಳೂರು ಜೈಲಿನಲ್ಲಿ ಸೆ.11ರಂದು ಸಹಖೈದಿಗಳು ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನವನೀತ್ ಶೆಟ್ಟಿ, ನಿರಂಜನ್ ಭಟ್ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಭದ್ರತೆ ಕಾರಣಗಳಿಗೆ ಈ ಇಬ್ಬರು ಹಾಗೂ ರಾಜೇಶ್ವರಿ ಶೆಟ್ಟಿ ಅವರನ್ನು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಹಿನ್ನೆಲೆಯಲ್ಲಿ ಈ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಶಿವಮೊಗ್ಗ ಕಾರಾಗೃಹದಿಂದ ಪೊಲೀಸ್ ವ್ಯಾನಿನಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಬಳಿಕ ಇವರೊಂದಿಗೆ ಸಾಕ್ಷಿ ನಾಶ ಆರೋಪಿಗಳಾದ ಶ್ರೀನಿವಾಸ ಭಟ್, ರಾಘವೇಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಈ ಸಂದರ್ಭ ನ್ಯಾಯಾಧೀಶರು ಆರೋಪಿಗಳ ದೋಷಾರೋಪ ವಾಚಿಸಿದರು. ಆದರೆ ಆರೋಪಿಗಳು ಈ ಆರೋಪವನ್ನು ನಿರಾಕರಿಸಿದರು. ಆದುದ ರಿಂದ ಪ್ರಕರಣದ ವಿಚಾರಣೆಯನ್ನು ನ.28ಕ್ಕೆ ಮುಂದೂಡಲಾಯಿತು. ಈ ಸಂದರ್ಭ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ, ಪ್ರಕರಣದ ತನಿಖಾಧಿಕಾರಿ ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ಹಾಜರಿದ್ದರು. ಬಳಿಕ ಆರೋಪಿ ಗಳನ್ನು ಬಿಗಿ ಭದ್ರತೆಯಲ್ಲಿ ಶಿವಮೊಗ್ಗ ಜೈಲಿಗೆ ಕರೆದೊಯ್ಯಲಾಯಿತು.

ಪೊಲೀಸ್ ವ್ಯಾನ್ ಬಳಕೆ
ಆ. 21ರಂದು ಮಂಗಳೂರಿನ ಜೈಲಿನಲ್ಲಿದ್ದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ನ್ಯಾಯಾಲಯಕ್ಕೆ ಹಾಜರಾಗಲು ಅವರೆ ಗೊತ್ತುಪಡಿಸಿದ ಹವಾನಿಯಂತ್ರಿತ  ಕಾರಿನ ವ್ಯವಸ್ಥೆ ಕಲ್ಪಿಸಿ ರಾಜಾತಿಥ್ಯ ನೀಡಿದ್ದು, ಈ ಹಿನ್ನೆಲೆಯಲ್ಲಿ ಇದಕ್ಕೆ ಸಹಕರಿಸಿದ ಎಸ್ಸೈ ಸಹಿತ ಮೂವರು ಪೊಲೀಸ್ ಸಿಬ್ಬಂದಿಯನ್ನು ಉಡುಪಿ ಎಸ್ಪಿ ಅಮಾನತುಗೊಳಿಸಿದ್ದರು.

ಕಳೆದ ಬಾರಿಯ ವಿವಾದದಿಂದ ಎಚ್ಚೆತ್ತುಕೊಂಡಿರುವ ಮಣಿಪಾಲ ಹಾಗೂ ಉಡುಪಿ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಇಂದು ಆರೋಪಿಗಳನ್ನು ಶಿವಮೊಗ್ಗ ಜೈಲಿನಿಂದ ಸಶಸ್ತ್ರ ಮೀಸಲು ಪಡೆಯ ವ್ಯಾನಿನಲ್ಲಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದರ ಉಸ್ತುವಾರಿಯನ್ನು ತನಿಖಾಧಿ ಕಾರಿ ಸುದರ್ಶನ್ ಅವರು ವಹಿಸಿ ಕೊಂಡಿರುವುದು ಕಂಡುಬಂದಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News