ಬ್ರೆಝಿಲ್-ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ ಸ್ಥಳಾಂತರ

Update: 2017-10-23 18:20 GMT

ಹೊಸದಿಲ್ಲಿ, ಅ.23:ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಬ್ರೆಝಿಲ್ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿರುವ ಮೊದಲ ಸೆಮಿ ಫೈನಲ್ ಪಂದ್ಯ ಗುವಾಹತಿಯ ಇಂದಿರಾ ಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಿಂದ ಕೋಲ್ಕತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಗುವಾಹತಿ ಸ್ಟೇಡಿಯಂನ ಕಳಪೆ ಪಿಚ್ ಸೆಮಿಫೈನಲ್ ಪಂದ್ಯದ ಸ್ಥಳಾಂತರಕ್ಕೆ ಕಾರಣ ಎನ್ನಲಾಗಿದೆ. ಮೊದಲ ಸೆಮಿಫೈನಲ್ ಪಂದ್ಯ ಅಕ್ಟೋಬರ್ 25 ರಂದು ಸಂಜೆ 5ಕ್ಕೆ ನಡೆಯಲಿದೆ.

‘‘ಇಂಗ್ಲೆಂಡ್ ತಂಡ ಪಿಚ್ ಬಗ್ಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದೆ. ಆದರೆ, ಬ್ರೆಝಿಲ್ ಆಟಗಾರರು ಗುವಾಹತಿ ಪಿಚ್‌ನಲ್ಲಿ ಆಡಲು ಹಿಂದೇಟು ಹಾಕಿದರು. ಪಿಚ್ ಗುಣಮಟ್ಟವನ್ನು ಸುಧಾರಿಸಲು ಎಲ್ಲ ಪ್ರಯತ್ನ ನಡೆಸಿದ್ದೆವು. ಆದರೆ, ಇದೀಗ ಪಂದ್ಯ ಬೇರೆಡೆಗೆ ಸ್ಥಳಾಂತರವಾಗುತ್ತಿದೆ. ಇಂದು ಸಂಜೆ ಉಭಯ ತಂಡಗಳು ಗುವಾಹತಿಯಿಂದ ಕೋಲ್ಕತಾಕ್ಕೆ ನಿರ್ಗಮಿಸಲಿವೆ’’ಎಂದು ಅಸ್ಸಾಂ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಹೇಮೇಂದ್ರ ನಾಥ್ ಬ್ರಹ್ಮ ಹೇಳಿದ್ದಾರೆ.

ಫಿಫಾ ಹಾಗೂ ಅಸ್ಸಾಂ ಸರಕಾರದ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಸಭೆ ನಡೆಸಿ ಬುಧವಾರದಂದು ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯ ಆಯೋಜಿಸುವುದಕ್ಕೆ ಸಂಬಂಧಿಸಿ ಚರ್ಚಿಸಿದೆ. ಈ ಬಗ್ಗೆ ಬ್ರೆಝಿಲ್-ಇಂಗ್ಲೆಂಡ್ ತಂಡಗಳ ಅಭಿಪ್ರಾಯಪಡೆಯಲು ನಿರ್ಧರಿಸಲಾಗಿತ್ತು. ಬ್ರೆಝಿಲ್ ಗುವಾಹತಿಯಲ್ಲಿ ಆಡಲು ನಿರಾಕರಿಸಿತು.

ಅಕ್ಟೋಬರ್ 21 ರಂದು ಘಾನಾ-ಮಾಲಿ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯ ಮಳೆ ನಡುವೆ ನಡೆದಿತ್ತು. ಮಾಲಿ ಗುವಾಹಟಿಯ ವಾತಾವರಣದಲ್ಲಿ ಹೊಂದಿಕೊಂಡು ಆಡಿದ್ದರೆ, ಘಾನಾ ತಂಡ ಮೈದಾನದ ಬಗ್ಗೆ ದೂರು ಸಲ್ಲಿಸಿತ್ತು.

ಇಂಗ್ಲೆಂಡ್ ತಂಡ ಸ್ಟ್ರೈಕರ್ ರಿಯಾನ್ ಬ್ರೆವ್‌ಸ್ಟರ್ ಹ್ಯಾಟ್ರಿಕ್ ಗೋಲಿನ ಸಹಾಯದಿಂದ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕವನ್ನು 4-1 ಅಂತರದಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪಿತ್ತು. ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಬ್ರೆಝಿಲ್ ತಂಡ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಜರ್ಮನಿಯ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News