ಡಿಎನ್‌ಎ ಪರೀಕ್ಷೆಯ ಚರ್ಚೆಗಾಗಿ ನೇತಾಜಿ ಮಗಳಿಂದ ಮೋದಿ ಭೇಟಿ
ಲಂಡನ್, ಅ. 24: ಜಪಾನ್‌ನ ದೇವಾಲಯವೊಂದರಲ್ಲಿರುವ ನೇತಾಜಿ ಸುಭಾಶ್‌ಚಂದ್ರ ಬೋಸ್‌ರ ಚಿತಾಭಸ್ಮವನ್ನು ಭಾರತಕ್ಕೆ ತಂದು ಡಿಎನ್‌ಎ ಪರೀಕ್ಷೆ ನಡೆಸುವ ತನ್ನ ಯೋಜನೆಯ ಬಗ್ಗೆ ಚರ್ಚಿಸುವುದಕ್ಕಾಗಿ ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ಬೋಸ್‌ರ ಮಗಳು ಅನಿತಾ ಬೋಸ್ ಪಫ್ ಹೇಳಿದ್ದಾರೆ.
1945 ಆಗಸ್ಟ್ 18ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಇಂಡಿಯನ್ ನ್ಯಾಶನಲ್ ಆರ್ಮಿಯ ಸ್ಥಾಪಕ ಮೃತಪಟ್ಟಿದ್ದಾರೆ ಎನ್ನುವುದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವುದಕ್ಕಾಗಿ ಚಿತಾಭಸ್ಮವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಎಂಬ ಪ್ರಸ್ತಾಪ ಹಿಂದಿನಿಂದಲೂ ಇತ್ತು.
ಅವರ ಸಾವಿನ ಬಳಿಕ, ಚಿತಾಭಸ್ಮವನ್ನು ಟೋಕಿಯೊದ ರೆಂಕೋಜಿ ದೇವಾಲಯದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಹೇಳಲಾಗಿದೆ.
‘70 ವರ್ಷಗಳ ಸ್ವತಂತ್ರ ಭಾರತ: ನೇತಾಜಿ ಏನು ಆಶಿಸಿದ್ದಿರಬಹುದು?’ ಎಂಬ ಕುರಿತ ವಿಚಾರಸಂಕಿರಣವೊಂದರಲ್ಲಿ ಭಾಗವಹಿಸುವುದಕ್ಕಾಗಿ 74 ವರ್ಷದ ಅನಿತಾ ಬೋಸ್ ಲಂಡನ್‌ನಲ್ಲಿದ್ದಾರೆ.
ಗುಮ್ನಾಮಿ ಬಾಬಾ ಎಂಬ ಕಟ್ಟು ಕತೆ
ತನ್ನ ತಂದೆ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಅನಿತಾ ಬೋಸ್‌ಗೆ ಮನವರಿಕೆಯಾಗಿದೆ.
‘‘ನನ್ನ ತಂದೆ ಬದುಕಿದ ರೀತಿಯಿಂದಾಗಿ ಅವರ ಬಗ್ಗೆ ಹಲವಾರು ಕತೆಗಳು ಹುಟ್ಟಿಕೊಂಡಿವೆ. ‘ಗುಮ್ನಾಮಿ ಬಾಬಾ’ ಎಂಬ ಕತೆಯ ಬಗ್ಗೆ ಹೇಳುವುದಾದರೆ, ಅದು ಅಸಂಬದ್ಧ. ಅದು ನೇತಾಜಿಗೆ ಮಾಡುವ ಅವಮಾನ’’ ಎಂದು ಅವರು ಅಭಿಪ್ರಾಯಪಟ್ಟರು.
ನೇತಾಜಿ ನಾಪತ್ತೆಯಾಗುವಾದ ಅನಿತಾ ಒಂದು ತಿಂಗಳ ಮಗುವಾಗಿದ್ದರು.